4 ರಾಜ್ಯಗಳ 5 ಉಪಚುನಾವಣೆ: ಬಿಜೆಪಿ ಶೂನ್ಯ ಸಾಧನೆ
ಹೊಸದಿಲ್ಲಿ: ನಾಲ್ಕು ರಾಜ್ಯಗಳ ಐದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಶನಿವಾರ ರಾತ್ರಿ ಪ್ರಕಟವಾಗಿದ್ದು, ಬಿಜೆಪಿ ಶೂನ್ಯ ಸಾಧನೆ ಮಾಡಿದೆ.
ಅಸನ್ಸೋಲ್ ಲೋಕಸಭಾ ಕ್ಷೇತ್ರವನ್ನು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಬಿಜೆಪಿಯಿಂದ ಕಿತ್ತುಕೊಂಡಿದೆ. ಬಲ್ಲಿಗುಂಗ್ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಂ ಬಳಿಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಛತ್ತೀಸ್‍ಗಢದ ಖೈರಾಗಢ, ಬಿಹಾರದ ಬೊಚಾಹ ಮತ್ತು ಮಹಾರಾಷ್ಟ್ರದ ಉತ್ತರ ಕೊಲ್ಹಾಪುರ ಕ್ಷೇತ್ರದಲ್ಲಿ ದೊಡ್ಡ ಅಂತರದ ಸೋಲು ಒಪ್ಪಿಕೊಂಡಿದೆ.
ಅಸನ್ಸೋಲ್ ಕ್ಷೇತ್ರ ಟಿಎಂಪಿಗೆ ಪ್ರತಿಷ್ಠೆಯ ಸಂಕೇತವಾಗಿತ್ತು. ಇಲ್ಲಿ ಹೊಸ ಸೆಲೆಬ್ರಿಟಿ ಅಭ್ಯರ್ಥಿ ಶತ್ರುಘ್ನ ಸಿಂಗ್ ಅವರು ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಬಿಜೆಪಿಯ ಅಗ್ನಿಮಿತ್ರಾ ಪಾಲ್, ತಮ್ಮ ಸ್ವಕ್ಷೇತ್ರ ಅಸನ್ಸೋಲ್ (ದಕ್ಷಿಣ)ದಲ್ಲೇ ಹಿನ್ನಡೆ ಅನುಭವಿಸಬೇಕಾಯಿತು.
ಕೆಲವೇ ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಅವರು ಗೆದ್ದಿದ್ದರು. ಬಿಜೆಪಿ ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರನ್ನು ಗೆದ್ದುಕೊಂಡಿತ್ತು.
ಈ ಚುನಾವಣೆ ಬಳಿಕ ಲೋಕಸಭೆಯಲ್ಲಿ ಟಿಎಂಸಿ ಸದಸ್ಯರ ಸಂಖ್ಯೆ 23ಕ್ಕೇರಿದೆ. ರಾಜ್ಯ ವಿಧಾನಸಭೆಯಲ್ಲಿ 211 ಸದಸ್ಯರನ್ನು ಟಿಎಂಪಿ ಹೊಂದಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಕೇಸರಿ ಪಕ್ಷ ತೊರೆದಿದ್ದ ಮಾಜಿ ಸಂಸದ ಮತ್ತು ಕೇಂದ್ರ ಸಚಿವ ಬಬುಲ್ ಸುಪ್ರಿಯೊ ಅವರು ಸಿಪಿಎಂನ ಸೈರಾ ಶಾ ಹಲೀಮ್ ಅವರನ್ನು ಬಲ್ಲಿಗುಂಗ್ ಕ್ಷೇತ್ರದಲ್ಲಿ 20 ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನದಲ್ಲಿದ್ದು, ಸಿಪಿಎಂ ಅಭ್ಯರ್ಥಿಯ ಅರ್ಧದಷ್ಟು ಮತಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿದೆ.
ಬಿಹಾರದಲ್ಲಿ ಆರ್‍ಜೆಡಿಯ ಅಮರ್ ಕುಮಾರ್ ಪಾಸ್ವಾನ್ ಅವರು ಬಿಜೆಪಿ ಅಭ್ಯರ್ಥಿ ಬೇಬಿ ಕುಮಾರಿ ಅವರನ್ನು ಬೊಚಾಹ ಕ್ಷೇತ್ರದಲ್ಲಿ 36 ಸಾವಿರಕ್ಕೂ ಅಧಿಕ ಮತಗಳಿಂದ ಪರಾಭವಗೊಳಿಸಿದ್ದಾರೆ.