ಮ್ಯಾಚ್ ಫಿಕ್ಸ್ ಆಗಿರುವುದು ತಿಳಿದಿತ್ತು: ಪದಚ್ಯುತಿ ಬಗ್ಗೆ ಇಮ್ರಾನ್ ಖಾನ್‌ ಪ್ರತಿಕ್ರಿಯೆ

Update: 2022-04-17 18:23 GMT

ಕರಾಚಿ, ಎ.17: ತನ್ನ ಪದಚ್ಯುತಿಯ ಹಿಂದೆ ವಿದೇಶಿ ಪಿತೂರಿ ಅಡಗಿದೆ ಎಂದು ಪುನರುಚ್ಚರಿಸಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌, ತನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾದಾಗಲೇ ‘ಮ್ಯಾಚ್ ಫಿಕ್ಸ್’ ಆಗಿರುವುದು ತಿಳಿದಿತ್ತು ಎಂದು ಹೇಳಿದ್ದಾರೆ.

ಶನಿವಾರ ರಾತ್ರಿ ಕರಾಚಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಇಮ್ರಾನ್, ತನ್ನ ಸರಕಾರ ಷಡ್ಯಂತ್ರದ ಬಲಿಪಶುವಾಗಿದೆಯೇ ಅಥವಾ ಹಸ್ತಕ್ಷೇಪದ ಬಲಿಪಶುವಾಗಿತ್ತೇ ಎಂಬುದಕ್ಕೆ ಇಲ್ಲಿ ಸೇರಿದ ಜನತೆ ಉತ್ತರಿಸಬೇಕು ಎಂದರು. 
ʼಕರಾಚಿಗೆ ಹೃದಯಾಂತರಾಳದ ಅಭಿನಂದನೆಗಳು. ನಾನಿಲ್ಲಿಗೆ ಕೆಲವು ವಿಶೇಷ ವಿಷಯದ ಬಗ್ಗೆ ಮಾತನಾಡಲು ಬಂದಿದ್ದೇನೆ. ಇದು ಇಲ್ಲಿನ ಜನರ, ಅವರ ಮಕ್ಕಳ ಭವಿಷ್ಯದ ಸಮಸ್ಯೆಗೆ ಸಂಬಂಧಿಸಿದ ವಿಷಯವಾಗಿದೆ. ನಾನು ಯಾವತ್ತೂ ಯಾವ ದೇಶದ ವಿರೋಧಿಯೂ ಆಗಿರಲಿಲ್ಲ. ಭಾರತ ವಿರೋಧಿ, ಯುರೋಪ್ ವಿರೋಧಿ ಅಥವಾ ಅಮೆರಿಕ ವಿರೋಧಿಯಾಗಿರಲಿಲ್ಲ. ವಿಶ್ವದ ಮಾನವೀಯತೆಯ ಜತೆಗಿದ್ದೆ. ಎಲ್ಲರೊಂದಿಗೂ ಸ್ನೇಹದಿಂದ ಇದ್ದೆ, ಆದರೆ ಯಾರಿಗೂ ಗುಲಾಮನಾಗಿರಲಿಲ್ಲʼ ಎಂದು ಇಮ್ರಾನ್ ಖಾನ್‌ ಹೇಳಿದರು.

ನನ್ನ ವಿರುದ್ಧ ಷಡ್ಯಂತ್ರ ರಚನೆಯಾಗುತ್ತಿದೆ ಎಂದು ಓರ್ವ ಪತ್ರಕರ್ತ ಕೆಲ ದಿನಗಳ ಹಿಂದೆಯೇ ಮಾಹಿತಿ ನೀಡಿದ್ದ. ಅದರಂತೆ ಅಮೆರಿಕದಲ್ಲಿನ ನಮ್ಮ ರಾಯಭಾರಿ ಡೊನಾಲ್ಡ್ ಲು (ದಕ್ಷಿಣ ಮತ್ತು ಕೇಂದ್ರ ಏಶ್ಯದ ವ್ಯವಹಾರಕ್ಕೆ ಸಂಬಂಧಿಸಿದ ಅಮೆರಿಕದ ಸಹಾಯಕ ವಿದೇಶಾಂಗ ಕಾರ್ಯದರ್ಶಿ) ಅವರನ್ನು ಭೇಟಿಯಾದರು ಎಂದು ಇಮ್ರಾನ್ ಖಾನ್‌ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News