ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿದೇಶಿ ಆಟಗಾರನಿಗೆ ಕೊರೋನ ಸೋಂಕು ದೃಢ

Update: 2022-04-18 08:19 GMT

ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ವಿದೇಶಿ  ಆಟಗಾರರೊಬ್ಬರಿಗೆ ಕೋವಿಡ್-19 ಪರೀಕ್ಷೆಯಲ್ಲಿ  ಪಾಸಿಟಿವ್ ವರದಿ ಬಂದಿದ್ದು, ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಮುಂದಿನ ಐಪಿಎಲ್ ಪಂದ್ಯಕ್ಕಾಗಿ ಡೆಲ್ಲಿ ಫ್ರಾಂಚೈಸಿಯ ಪುಣೆ ಪ್ರಯಾಣವನ್ನು ವಿಳಂಬಗೊಳಿಸುವುದು ಅನಿವಾರ್ಯವಾಗಿದೆ.

ವಿದೇಶಿ ಆಟಗಾರನಿಗೆ ಕೊರೋನ ಸೋಂಕು ತಗಲಿರುವುದರೊಂದಿಗೆ ಡೆಲ್ಲಿ ತಂಡದಲ್ಲಿ ಒಟ್ಟು ಸೋಂಕಿತರ  ಸಂಖ್ಯೆ ಮೂರಕ್ಕೆ ಏರಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು NDTV ಗೆ ತಿಳಿಸಿವೆ.

ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಹಾಗೂ  ತಂಡದ ಸಹಾಯಕ ಸಿಬ್ಬಂದಿ ಕಳೆದ ವಾರ ಕೊರೋನ ಸೋಂಕಿಗೆ ಒಳಗಾಗಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.  ಆದರೆ ವಿದೇಶಿ ಆಟಗಾರನ ಪರೀಕ್ಷಾ ಫಲಿತಾಂಶಗಳು ಇಂದು ಪಾಸಿಟಿವ್ ಆಗಿತ್ತು.

ಆಸ್ಟ್ರೇಲಿಯಾದ ಆಲ್‌ರೌಂಡರ್‌ಗೆ ಕೆಲವು ರೋಗಲಕ್ಷಣಗಳು ಕಂಡುಬಂದಿವೆ ಹಾಗೂ ಕ್ಷಿಪ್ರ ಆಂಟಿಜೆನ್ ಪರೀಕ್ಷೆಯನ್ನು ನಡೆಸಲಾಯಿತು. ಅದು ಪಾಸಿಟಿವ್ ಆಗಿದೆ ಎಂದು ತಿಳಿದುಬಂದಿದೆ.

“ಡೆಲ್ಲಿ ಕ್ಯಾಪಿಟಲ್ಸ್  ಇಂದು ಪುಣೆಗೆ ಪ್ರಯಾಣಿಸಬೇಕಿತ್ತು.  ಆದರೆ ಇಡೀ ತಂಡದ ಸದಸ್ಯರಿಗೆ ಆಯಾ ಕೊಠಡಿಗಳಲ್ಲಿಉಳಿಯುವಂತೆ ತಿಳಿಸಲಾಗಿದೆ ಹಾಗೂ  ಡೆಲ್ಲಿ ತಂಡದಲ್ಲಿ ಎಲ್ಲರಿಗೂ ಸೋಂಕು ಹಬ್ಬಿದೆಯೇ  ಅಥವಾ ಫಿಜಿಯೋ ಪ್ಯಾಟ್ರಿಕ್‌ ಫರ್ಹಾರ್ಟ್ ರಂತೆ ಒಬ್ಬರಿಗೆ ಮಾತ್ರ ಸೋಂಕು ತಗಲಿದೆಯೇ  ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರೋಟೋಕಾಲ್ ಪ್ರಕಾರ ಆಟಗಾರರಿಗೆ ಆರ್‌ಟಿ ಪಿಸಿಆರ್ ಮಾಡಲಾಗುತ್ತಿದೆ" ಎಂದು ಬಿಸಿಸಿಐ ಮೂಲವೊಂದು ಸೋಮವಾರ ಪಿಟಿಐಗೆ ತಿಳಿಸಿದೆ.

ಕಳೆದ ವರ್ಷ ಕೊರೋನದ ಎರಡನೇ ಅಲೆಯಿಂದಾಗಿ ಪಂದ್ಯಾವಳಿಯನ್ನು ಮಧ್ಯದಲ್ಲಿ ಸ್ಥಗಿತಗೊಳಿಸಲಾಗಿತ್ತು. ಯುಎಇಯಲ್ಲಿ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಟೂರ್ನಿಯನ್ನು ಪೂರ್ಣಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News