×
Ad

ಮುಂದಿನ ವಿಧಾನ ಸಭಾ ಚುನಾವಣೆಗೆ 50 ಸ್ವಾಮೀಜಿಗಳು ಸ್ಪರ್ಧಿಸಲಿದ್ದೇವೆ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

Update: 2022-04-18 19:56 IST

ಭಟ್ಕಳ: ರಾಜಕೀಯ ಕ್ಷೇತ್ರ ಸಂಪೂರ್ಣ ಹಾಳಾಗಿದ್ದು, ರಾಜ್ಯಾಂಗದ ವ್ಯವಸ್ಥೆಯೇ ದಿಕ್ಕು ತಪ್ಪಿದೆ, ರಾಜ್ಯಾಂಗದಲ್ಲಿ ಸಮಗ್ರ ಬದಲಾವಣೆ ತರಲು ಮುಂದಿನ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ನಾನೂ ಸೇರಿದಂತೆ 50 ಸ್ವಾಮೀಜಿಗಳು ಸ್ಪರ್ಧಿಸಲಿದ್ದೇವೆ ಎಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದ್ದಾರೆ.

ಶಿರಾಲಿಯ ಹಳೇಕೋಟೆ ಹನುಮಂತ ದೇವಸ್ಥಾನದ ಶಿಲಾಮಯ ದೇಗುವ ಸಮರ್ಪಣೆ, ಶ್ರೀ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಇಂದು ಶಾಸಕನಾಗುವವನು ತಾನೆಷ್ಟು ಗಳಿಸುತ್ತೇನೆ ಎನ್ನುವ ಲೆಕ್ಕಾಚಾರದೊಂದಿಗೆ ಚುನಾವಣೆಗೆ ನಿಲ್ಲುತ್ತಾನೆ. ನಮಗೆ ಸರಕಾರ ಸಂಬಳ ಕೊಡುವುದೂ ಬೇಡ, ಕೇವಲ ರೇಷನ್ ಕೊಟ್ಟರೆ ಸಾಕು, ಕ್ಷೇತ್ರ ಸುತ್ತುವ ಭತ್ತೆಯನ್ನು ಕೂಡಾ ನಾವು ಕೇಳುವುದಿಲ್ಲ, ಪಿಂಚಣಿಯಂತೂ ಬೇಡವೇ ಬೇಡ ಎಂದ ಸ್ವಾಮೀಜಿಗಳು, ಪ್ರಜೆಗಳ ದುಡ್ದು ಅನಾವಶ್ಯಕ ದುಂದು ವೆಚ್ಚವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಚುನಾವನಾ ಆಖಾಡಕ್ಕೆ ಧುಮುಕಲು ನಮಗೆ ಮೋದೀಜಿ ಹಾಗೂ ಯೋಗೀಜಿ ಪ್ರೇರಣೆ ಎಂದ ಅವರು ನಾವು ಎಲ್ಲರೂ ಯಾವುದೇ ಪಕ್ಷದಿಂದ ನಿಲ್ಲುವುದಿಲ್ಲ, ನಮಗೆ ಭಗವದ್ಗೀತೆಯೇ ಚಿಹ್ನೆ ಎಂದೂ ಹೇಳಿದರು.

ವಿಧಾನ ಸಭೆಯ ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ ನಿಗದಿಯಾಗಬೇಕು, ಮಂತ್ರಿಗಳಾಗಲು ಕೂಡಾ ವಿದ್ಯಾರ್ಹತೆಯನ್ನು ಮಾನದಂಡವನ್ನಾಗಿಸಬೇಕು, ಇಂದು ವಿದ್ಯೆಯಿಲ್ಲದ ಮಂತ್ರಿಗಳು ನಮ್ಮನ್ನಾಳುತ್ತಿದ್ದಾರೆ ಎಂದರೆ ಇದೊಂದು ವಿಡಂಬನೆಯಲ್ಲದೇ ಬೇರೇನೂ ಅಲ್ಲ. ಶಾಸಕರಿಗೆ ಪ್ರತಿ ತಿಂಗಳೂ ಒಂದು ತರಬೇತಿಯನ್ನು ಕಡ್ದಾಯಗೊಳಿಸಬೇಕು. ಅವರ ಹಕ್ಕು ಬಾಧ್ಯತೆಗಳನ್ನು, ಸಂವಿಧಾನದ ಆಶಯವನ್ನು ತಿಳಿಸಬೇಕು ಎಂದೂ ಶ್ರೀಗಳು ಹೇಳಿದರು.

ವಿಧಾನ ಸೌಧದಲ್ಲಿ ಇನ್ನಿಲ್ಲದಂತೆ ಕಚ್ಚಾಡಿಕೊಳ್ಳುವವರು ಹೊರ ಬಂದ ತಕ್ಷಣ ಟೇಬಲ್ ಹಂಚಿಕೊಂಡು ಚಹಾ ಸೇವಿಸುತ್ತಾರೆ. ಕೇವಲ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಮಾಡುತ್ತಾ ಜನರ ಹಣ ದುರುಪಯೋಗವಾಗುತ್ತಿದೆ. ವಿಧಾನ ಸಭಾಧ್ಯಕ್ಷ ಕಾಗೇರಿಯವರು ಸಭೆಯನ್ನು ನಡೆಸಲು ಪಡುವ ಪಡಿಪಾಟಿಲು ನೋಡಿಯೇ ನಮಗೆ ಬೇಸರವೆನಿಸುತ್ತಿದೆ. ಇದು ಸರಿಯಾಗಬೇಕು, ರಾಜ್ಯಾಂಗ ಹಳಿತಪ್ಪಿದ್ದನ್ನು ಸರಿಪಡಿಸಬೇಕು ಎನ್ನುವುದೇ ನಮ್ಮ ಸ್ಪರ್ಧೆಯ ಉದ್ದೇಶ ಎಂದರು.

ನಮ್ಮ ಪ್ರಚಾರಕ್ಕೆ ಜನ ಬೇಡಾ ಹಿಮಾಲಯದಿಂದ ಸಾಧು ಸಂತರು ಸಾವಿರ ಸಂಖ್ಯೆಯಲ್ಲಿ ಬರುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ವಿದೇಶ ಯಾತ್ರೆಯ ನೆಪದಲ್ಲಿ ಕೋಟ್ಯಂತರ ರೂಪಾಯಿ ಜನರ ತೆರಿಗೆಯ ಹಣವನ್ನು ವೆಚ್ಚ ಮಾಡಲಾಗುತ್ತಿದ್ದು ವಿದೇಶ ಯಾತ್ರೆಯ ಪರಿಣಾಮ ಮಾತ್ರ ಶೂನ್ಯ ಎಂದರು.

ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ರಾಜಕೀಯ ಕ್ಷೇತ್ರ ಸ್ವಚ್ಚವಾಗಬೇಕು ಎನ್ನುವ ಮಾರ್ಮಿಕ ನುಡಿಗಳನ್ನು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಡಿದ್ದಾರೆ. ಅವರ ಮಾತಿನಲ್ಲಿ ಬಲವಾದ ಒಂದು ಎಚ್ಚರಿಕೆಯ ಸಂದೇಶವೂ ಇದೆ. ರಾಜಕೀಯ ಕ್ಷೇತ್ರದಲ್ಲಿರುವವರು ಸಂತರ ನೋವುಗಳನ್ನು, ಸಮಾಜದ ಆಶಯಗಳನ್ನು ಅರಿತು ಕೆಲಸ ಮಾಡಿದರೆ ಅದು ಅವರಿಗೆ ಶೋಭೆ ತರುತ್ತದೆ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಆರ್. ಎನ್. ನಾಯ್ಕ ಮಾತನಾಡಿ ಹನುಮಂತ ಸಾವಿರ ಸಾವಿರ ವರ್ಷಗಳ ಹಿಂದೆಯೇ ನಮ್ಮ ಇಂದಿನ ಸಂವಿಧಾನದ ಆಶಯವನ್ನು ಎತ್ತಿ ಹಿಡಿದ ಮಹಾನ್ ವ್ಯಕ್ತಿಯಾಗಿದ್ದಾನೆ. ರಾಮಾಯಣದಲ್ಲಿ ಸ್ತ್ರೀ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಆತನೇ ಕಾರಣೀಕರ್ತನಾಗಿದ್ದು ಆತನ ಆದರ್ಶ, ರಾಮ ಭಕ್ತಿಯಿಂದ ದೇವರಾಗಿದ್ದಾನೆ ಎಂದರು.

ಮಾಜಿ ಶಾಸಕರಾದ ಜೆ.ಡಿ. ನಾಯ್ಕ, ಮಂಕಾಳ ಎಸ್. ವೈದ್ಯ ಮಾತನಾಡಿದರು.

ವೇದಿಕೆಯಲ್ಲಿ ಶಾಸಕ ಸುನಿಲ್ ನಾಯ್ಕ, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸುಬ್ರಾಯ ನಾಯ್ಕ, ಧರ್ಮದರ್ಶಿ ಸುಬ್ರಾಯ ನಾಯ್ಕ ಕಾಯ್ಕಿಣಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ, ನಾಥಪಂತದ ಪ್ರಮುಖ ಶಿವರಾಮ ಬಳೇಗಾರ, ಶಿರಸಿ ಮಾರಿಕಾಂಬಾ ದೇವಾಲಯದ ಮಾಜಿ ಅಧ್ಯಕ್ಷ ಡಾ. ವೆಂಕಟೇಶ ನಾಯ್ಕ, ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್., ತಹಶೀಲ್ದಾರ್ ಡಾ. ಸುಮಂತ್ ಬಿ.ಇ., ಕೊಪ್ಪ ಗ್ರಾ.ಪಂ. ಅಧ್ಯಕ್ಷ ರಾಜು ನಾಯ್ಕ, ಮಾವಳ್ಳಿ ಗ್ರಾ,ಪಂ. ಅಧ್ಯಕ್ಷ ಮಹೇಶ ನಾಯ್ಕ, ಪ್ರಸಾದ ಮುನಿಯಂಗಳ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News