ಗೇನ್ ಬಿಟ್ ಕಾಯ್ನ್ ಹಗರಣ: ತನ್ನ ಆದೇಶ ಪಾಲಿಸದ ಪ್ರಮುಖ ಆರೋಪಿಗೆ ಸುಪ್ರೀಂ ತರಾಟೆ

Update: 2022-04-19 16:52 GMT

ಹೊಸದಿಲ್ಲಿ, ಎ.19: ತಾನು ಈ ಹಿಂದೆ ನಿರ್ದೇಶ ನೀಡಿದ್ದರೂ ಕ್ರಿಪ್ಟೋ ವ್ಯಾಲೆಟ್‌ನ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಅನ್ನು ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಈ.ಡಿ.) ದೊಂದಿಗೆ ಹಂಚಿಕೊಳ್ಳದ್ದಕ್ಕಾಗಿ ಗೇನ್‌ಬಿಟ್‌ಕಾಯ್ನ್ ಹಗರಣದ ಆರೋಪಿ ಅಜಯ್ ಭಾರದ್ವಾಜನನ್ನು ಸರ್ವೋಚ್ಚ ನ್ಯಾಯಾಲಯವು ತರಾಟೆಗೆತ್ತಿಕೊಂಡಿದೆ.

ನ್ಯಾಯಾಲಯದ ಮಾ.28ರ ಆದೇಶವನ್ನು ಪಾಲಿಸಲಾಗಿಲ್ಲ. ಹೀಗಾಗಿ ತನ್ನ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಭಾರದ್ವಾಜ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವುದಾಗಿ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಸೂರ್ಯಕಾಂತ ಅವರ ಪೀಠವು ಎಚ್ಚರಿಕೆ ನೀಡಿತು.

‘ನೀವು ವಿವರಗಳನ್ನು ಹಂಚಿಕೊಳ್ಳಲೇಬೇಕು, ಇಲ್ಲದಿದ್ದರೆ ಆದೇಶದ ಉಲ್ಲಂಘನೆಗಾಗಿ ಅರ್ಜಿಯನ್ನು ನಾವು ವಜಾಗೊಳಿಸಬೇಕಾಗುತ್ತದೆ. ನೀವು ಇಲ್ಲಿ ಹೇಳಿಕೆಯನ್ನು ನೀಡುತ್ತಿರಿ ಮತ್ತು ಬಳಿಕ ಅದನ್ನು ಪಾಲಿಸುವುದಿಲ್ಲ. ನಾವು ಯಾವುದೋ ತೀಸ್ ಹಝಾರಿ ನ್ಯಾಯಾಲಯವಲ್ಲ’ ಎಂದು ಪೀಠವು ಭಾರದ್ವಾಜ ಪರ ಹಿರಿಯ ವಕೀಲ ಸಿದ್ಧಾರ್ಥ ದವೆಯವರನ್ನು ಝಾಡಿಸಿತು.

ತನ್ನ ವಿರುದ್ಧದ ಆರೋಪಗಳನ್ನು ರದ್ದುಗೊಳಿಸುವಂತೆ ಕೋರಿ ಭಾರದ್ವಾಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯವು 2019, ಆಗಸ್ಟ್‌ನಲ್ಲಿ ಆತನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು ಮತ್ತು ಭದ್ರತೆಯಾಗಿ ಒಂದು ಕೋಟಿ ರೂ.ಗಳನ್ನು ಠೇವಣಿಯಿರಿಸುವಂತೆ ಸೂಚಿಸಿತ್ತು.

ಮಾ.28ರಂದು ಸರ್ವೋಚ್ಚ ನ್ಯಾಯಾಲಯವು ಅರ್ಜಿದಾರನು ತನಿಖೆಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂಬ ಷರತ್ತಿನೊಂದಿಗೆ ಆತನಿಗೆ ಬಂಧನದಿಂದ ರಕ್ಷಣೆ ನೀಡಿದ್ದ ತನ್ನ ಮಧ್ಯಂತರ ಆದೇಶವನ್ನು ಮುಂದುವರಿಸಿತ್ತು.

ಸೋಮವಾರ ಈ.ಡಿ.ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು,ಭಾರದ್ವಾಜ ತನ್ನಿಂದ ಕೇಳಿರುವ ವಿವರಗಳನ್ನು ಹಂಚಿಕೊಳ್ಳುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ವ್ಯಾಲೆಟ್‌ಗಳು ಪುಣೆ ಪೊಲೀಸರ ಬಳಿಯಲ್ಲಿದ್ದು,ಆರೋಪಿಯು ತಮ್ಮೆದುರು ಹಾಜರಾಗಿಲ್ಲ ಅಥವಾ ಮಾಹಿತಿಗಳನ್ನು ಹಂಚಿಕೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News