ಕಾಬೂಲ್: ಬಾಂಬ್ ಸ್ಫೋಟ; 7 ಮಕ್ಕಳು ಮೃತ್ಯು

Update: 2022-04-19 17:55 GMT

ಕಾಬೂಲ್, ಎ.19: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಎರಡು ಶಾಲೆಗಳನ್ನು ಗುರಿಯಿರಿಸಿ ನಡೆಸಲಾದ ಸ್ಫೋಟದಲ್ಲಿ ಕನಿಷ್ಠ ಏಳು ಮಂದಿ ಮಕ್ಕಳು ಸಾವನ್ನಪ್ಪಿದ್ದು, ಇನ್ನೂ ಹಲವಾರು ಮಕ್ಕಳು ಗಾಯಗೊಂಡಿದ್ದಾರೆ. ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿಯಿದೆಯೆಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಝದ್ರಾನ್ ತಿಳಿಸಿದ್ದಾರೆ.

ಕಾಬೂಲ್‌ನ ದಶ್ತೆ ಬಾರ್ಚಿ ವಸತಿ ಪ್ರದೇಶದಲ್ಲಿರುವ ಅಬ್ದುಲ್ ರಹೀಮ್ ಶಹೀದ್ ಹೈಸ್ಕೂಲ್ ಹಾಗೂ ಅಲ್ಲಿಂದ ಕೆಲವು ಕಿ.ಮೀ. ದೂರದಲ್ಲಿರುವ ಇನ್ನೊಂದು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸ್ಫೋಟ ಸಂಭವಿಸಿದೆ. ಭೀಕರ ಸ್ಫೋಟ ಸಂಭವಿಸಿದ ಅಬ್ದುಲ್ ರಹೀಮ್ ಶಹೀದ್ ಹೈಸ್ಕೂಲ್‌ನಲ್ಲಿ ರಕ್ತದ ಕಲೆಗಳು ಹರಡಿದ್ದು, ಸುಟ್ಟುಹೋದ ನೋಟ್‌ಪುಸ್ತಕಗಳು ಹಾಗೂ ಮಕ್ಕಳ ಶೂಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಧಾರುಣ ದೃಶ್ಯ ಕಂಡುಬರುತ್ತಿತ್ತೆಂದು ಸ್ಥಳಕ್ಕೆ ಭೇಟಿ ನೀಡಿದ್ದ ಅಸೋಸಿಯೇಟೆಡ್ ಪ್ರೆಸ್ ಸಂಸ್ಥೆಯ ವರದಿಗಾರರೊಬ್ಬರು ತಿಳಿಸಿದ್ದಾರೆ.

ವಿಶಾಲವಾದ ಶಾಲೆಯ ಆವರಣದೊಳಗೆ ಆತ್ಮಹತ್ಯಾ ಬಾಂಬರ್ ಒಬ್ಬಾತ ತನ್ನನ್ನು ತಾನೇ ಸ್ಪೋಟಿಸಿಕೊಂಡಿರುವ ಹಾಗೆ ಕಾಣುತ್ತದೆಯೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಶಾಲೆಯಲ್ಲಿ 1 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ ಸ್ಫೋಟದ ಸಮಯದಲ್ಲಿ ಎಷ್ಟು ಮಂದಿ ಮಕ್ಕಳಿದ್ದರೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ದಾಳಿಯ ಹೊಣೆಯನ್ನು ಈವರೆಗೆ ಯಾವುದೇ ಸಂಘಟನೆ ವಹಿಸಿಕೊಂಡಿಲ್ಲವಾದರೂ, ಈ ಹಿಂದೆಯೂ ಈ ಪ್ರದೇಶವನ್ನು ಗುರಿಯಿರಿಸಿ ಐಸಿಸ್ ಭಯೋತ್ಪಾದಕರು ದಾಳಿ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News