ಸೊಲೋಮನ್ ಐಲ್ಯಾಂಡ್ಸ್ ಜೊತೆ ಭದ್ರತಾ ಒಪ್ಪಂದಕ್ಕೆ ಚೀನಾ ಸಹಿ: ಅಮೆರಿಕ, ಪಾಶ್ಚಾತ್ಯ ರಾಷ್ಟ್ರಗಳಿಗೆ ಆತಂಕ

Update: 2022-04-19 18:03 GMT

ಬೀಜಿಂಗ್, ಎ.19: ದಕ್ಷಿಣ ಫೆಸಿಫಿಕ್ ಪ್ರದೇಶದ ರಾಷ್ಟ್ರವಾದ ಸೊಲೋಮನ್ ಐಲ್ಯಾಂಡ್ಸ್  ಜೊತೆ ತಾನು ವಿಸ್ತೃತವಾದ ಭದ್ರತಾ ಒಪ್ಪಂದಕ್ಕೆ ಸಹಿಹಾಕಿರುವುದಾಗಿ ಚೀನಾ ಮಂಗಳವಾರ ಘೋಷಿಸಿದೆ. ಈ ಒಪ್ಪಂದದಿಂದಾಗಿ ದಕ್ಷಿಣ ಫೆಸಿಫಿಕ್ ಸಾಗರ ಪ್ರದೇಶದಲ್ಲಿ ಚೀನಾಕ್ಕೆ ತನ್ನ ಮಿಲಿಟರಿ ನೆಲೆಯನ್ನು ಸ್ಥಾಪಿಸಲು ಸಾಧ್ಯವಾಗಲಿದ್ದು, ಅಮೆರಿಕ ಹಾಗೂ ಅದರ ಪ್ರಾದೇಶಿಕ ಮಿತ್ರರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಚೀನಾ ಹಾಗೂ ಸೊಲೋಮನ್ ಐಲ್ಯಾಂಡ್ಸ್ ನಡುವಿನ ಭದ್ರತಾ ಒಪ್ಪಂದಕ್ಕೆ ವಾಶಿಂಗ್ಟನ್‌ಗೆ ವಿರೋಧ ವ್ಯಕ್ತಪಡಿಸಿದ ಮರುದಿನವೇ ಚೀನಾವು ಈ ಒಡಂಬಡಿಕೆಗೆ ಸಹಿಹಾಕಿರುವುದನ್ನು ದೃಢಪಡಿಸಿದೆ. ಬೀಜಿಂಗ್ ದಕ್ಷಿಣ ಫೆಸಿಫಿಕ್ ಸಾಗರ ಪ್ರದೇಶದಲ್ಲಿ ತನ್ನ ಮಿಲಿಟರಿ ಹೆಜ್ಜೆಗಳನ್ನಿಡುತ್ತಿರುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಮೆರಿಕದ ಅಧಿಕಾರಿಗಳು ಈ ವಾರ ಸೊಲೊಮನ್ ಐಲ್ಯಾಂಡ್ಸ್‌ಗೆ ತೆರಳಲಿದ್ದಾರೆಂದು ವಾಶಿಂಗ್ಟನ್ ಹೇಳಿಕೆ ನೀಡಿದ ಬೆನ್ನಲ್ಲೇ ಈ ಒಪ್ಪಂದವನ್ನು ಚೀನಾ ದೃಢಪಡಿಸಿದೆ.

‘‘ಚೀನಾ ಹಾಗೂ ಸೊಲೊಮನ್ ದ್ವೀಪಗಳ ವಿದೇಶಾಂಗ ಸಚಿವರುಗಳು ಇತ್ತೀಚೆಗೆ ಭದ್ರತಾ ಸಹಕಾರ ಕುರಿತಾದ ಕಾರ್ಯಚೌಕಟ್ಟಿನ ಒಪ್ಪಂದಕ್ಕೆ ಅಧಿಕೃತವಾಗಿ ಸಹಿಹಾಕಿದ್ದಾರೆ’’ ಎಂದು ಚೀನಾದ ವಿದೇಶಾಂಗ ಸಚಿವಾಲಯ ವಕ್ತಾರ ವಾಂಗ್‌ವೆನ್‌ಬಿನ್ ಮಂಗಳವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಆದರೆ ಯಾವಾಗ ಈ ಒಡಂಬಡಿಕೆಗೆ ಸಹಿಹಾಕಲಾಗಿದೆಯೆಂಬುದನ್ನು ಅದು ಇನ್ನೂ ಬಹಿರಂಗಪಡಿಸಿಲ್ಲ.

ರಾಜಕೀಯ ಬಿಕ್ಕಟ್ಟಿನಿಂದ ತತ್ತರಿಸಿರುವ ರಾಷ್ಟ್ರವಾದ ಸೊಲೊಮನ್ ದ್ವೀಪದಲ್ಲಿ ಸಾಮಾಜಿಕ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಸಶಸ್ತ್ರ ಚೀನಿ ಪೊಲೀಸರನ್ನು ನಿಯೋಜಿಸಲು ಈ ಒಪ್ಪಂದವು ಅವಕಾಶ ನೀಡುತ್ತದೆ.

ಒಪ್ಪಂದದ ಕರಡುಪ್ರತಿಯು ಕಳೆದ ತಿಂಗಳು ಸೋರಿಕೆಯಾಗಿತ್ತು. ಸೊಲೊಮನ್ ದ್ವೀಪದಲ್ಲಿ ಚೀನಾವು ನೌಕಾಪಡೆ ಹಾಗೂ ಭದ್ರತಾ ನಿಯೋಜನೆಗಳನ್ನು ನಡೆಸಲು ಈ ಒಪ್ಪಂದವು ಅನುಮತಿ ನೀಡಿರುವುದು ಅಮೆರಿಕ ಸೇರಿದಂತೆ ಪಾಶ್ಚಾತ್ಯ ದೇಶಗಳಿಗೆ ಆತಂಕವನ್ನು ಸೃಷ್ಟಿಸಿದೆ.

ಆಸ್ಟ್ರೇಲಿಯದಿಂದ 1200 ಮೈಲು ದೂರದಲ್ಲಿರುವ ಸೊಲೊಮನ್ ದ್ವೀಪದಲ್ಲಿ ಚೀನಾವು ತನ್ನ ಮಿಲಿಟರಿ ಉಪಸ್ಥಿತಿಯನ್ನು ಸ್ಥಾಪಿಸಲಿರುವುದು ಆಸ್ಟ್ರೇಲಿಯಕ್ಕೆ ಆತಂಕವನ್ನುಂಟು ಮಾಡಿದೆ.

ಈ ಮಧ್ಯೆ ಚೀನಾ-ಸೊಲೋಮನ್ ಐಲ್ಯಾಂಡ್ಸ್ ನಡುವಿನ ಒಪ್ಪಂದದ ಬಗ್ಗೆ ಪಾಶ್ಚಾತ್ಯ ರಾಷ್ಟ್ರಗಳು ಉದ್ದೇಶಪೂರ್ವಕವಾಗಿ ಉದ್ವಿಗ್ನತೆಯನ್ನು ಸೃಷ್ಟಿಸುತ್ತಿವೆಯೆಂದು ವಾಂಗ್ ವೆನ್‌ಬಿನ್ ಆರೋಪಿಸಿದ್ದಾರೆ ಹಾಗೂ ಅಮೆರಿಕ ಅಧಿಕಾರಿಳ ಸೊಲೋಮನ್ ಭೇಟಿಯ ಹಿಂದಿರುವ ಉದ್ದೇಶವನ್ನು ಕೂಡಾ ಅವರು ಪ್ರಶ್ನಿಸಿದ್ದಾರೆ.

ಈ ಭದ್ರತಾ ಒಪ್ಪಂದವು ಎರಡು ಸಾರ್ವಬೌಮ ಹಾಗೂ ಸ್ವತಂತ್ರ ದೇಶಳ ನಡುವೆ ಏರ್ಪಟ್ಟ ಸಹಜವಾದ ಸಹಕಾರ ಒಪ್ಪಂದವಾಗಿದೆ. ದ್ವೀಪ ರಾಷ್ಟ್ರಗಳ ಜೊತೆಗಿನ ಸಹಕಾರದಲ್ಲಿ ಹಸ್ತಕ್ಷೇಪ ನಡೆಸುವ ಹಾಗೂ ಅಡ್ಡಿಪಡಿಸುವ ಪ್ರಯತ್ನಗಳು ವಿಫಲವಾಗಲಿವೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News