ಶ್ರೀಲಂಕಾದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಓರ್ವ ಮೃತ್ಯು; 30ಕ್ಕೂ ಅಧಿಕ ಮಂದಿಗೆ ಗಾಯ

Update: 2022-04-20 15:56 GMT
Photo: twitter/AndyVermaut

ಕೊಲಂಬೊ, ಎ.20: ಶ್ರೀಲಂಕಾದ ರಂಬುಕನ ನಗರದಲ್ಲಿ ಸರಕಾರವನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ ಓರ್ವ ವ್ಯಕ್ತಿ ಮೃತಪಟ್ಟ ಬಳಿಕ ನಗರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಪರಿಸ್ಥಿತಿ ನಿಯಂತ್ರಿಸಲು ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಆಹಾರ, ಇಂಧನ, ಔಷಧ ಸಹಿತ ಅಗತ್ಯ ವಸ್ತುಗಳ ಕೊರತೆಯಿದೆ. ಸರಕಾರದ ಅದಕ್ಷತೆಯಿಂದ ಸಮಸ್ಯೆ ಬಿಗಡಾಯಿಸಿದೆ ಎಂದು ಆಕ್ರೋಶಗೊಂಡಿರುವ ಜನತೆ ಸರಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಪೆಟ್ರೋಲ್ ದರ ಮತ್ತೊಮ್ಮೆ ಹೆಚ್ಚಳವಾದಾಗ ಅದನ್ನು ಪ್ರತಿಭಟಿಸಿದ ಸಾವಿರಾರು ಮಂದಿ ಪ್ರಮುಖ ಹೆದ್ದಾರಿ ಮತ್ತು ರೈಲು ನಿಲ್ದಾಣದಲ್ಲಿ ರಸ್ತೆ ತಡೆ ನಡೆಸಿದ್ದರು.

 ಕೊಲಂಬೊ ಬಳಿಯ ರಂಬುಕನ ನಗರದಲ್ಲಿ ನಡೆಯುತ್ತಿದ್ದ ಬೃಹತ್ ಪ್ರತಿಭಟನೆಯನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಬಳಸಿದರೂ ಫಲನೀಡದಿದ್ದಾಗ ಗೋಲೀಬಾರ್ ನಡೆಸಿದ್ದಾರೆ. ಆಗ ಓರ್ವ ಮೃತಪಟ್ಟಿದ್ದು ಇತರ 30 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಗೋಲೀಬಾರ್ನಲ್ಲಿ ಓರ್ವ ಮೃತಪಟ್ಟ ವರದಿಯಿಂದ ಇನ್ನಷ್ಟು ಕೆರಳಿದ ಪ್ರತಿಭಟನಾಕಾರರು ಅಲ್ಲಲ್ಲಿ ಹಿಂಸಾಚಾರ ಕೃತ್ಯ ಮುಂದುವರಿಸಿದರು. ತೈಲ ಸಾಗಿಸುತ್ತಿದ್ದ ಟ್ಯಾಂಕರ್‌ಗೆ ಬೆಂಕಿ ಹಚ್ಚಲು ಮುಂದಾದಾಗ ಗುಂಡು ಹಾರಿಸಬೇಕಾಯಿತು. ಪರಿಸ್ಥಿತಿ ನಿಯಂತ್ರಿಸಲು ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಪೊಲೀಸರ ಹೇಳಿಕೆಯನ್ನು ತಳ್ಳಿಹಾಕಿರುವ ವಿಪಕ್ಷ ನಾಯಕಿ ರೋಹಿಣಿ ಕುಮಾರಿ ವಿಜೆರತ್ನ, ತೈಲ ಟ್ಯಾಂಕರ್ಗೆ ಬೆಂಕಿ ಹಚ್ಚಿ ತಮ್ಮನ್ನು ಬಲಿಕೊಡಲು ಜನ ಬಯಸುತ್ತಾರೆಯೇ ? ಎಂದು ಪ್ರಶ್ನಿಸಿದ್ದಾರೆ.

ಪೊಲೀಸ್ ಗೋಲಿಬಾರ್‌ನಲ್ಲಿ ಓರ್ವ ಮೃತಪಟ್ಟಿರುವ ವರದಿಯಿಂದ ತೀವ್ರ ದುಃಖವಾಗಿದ್ದು ಸರಕಾರದ ವಿರುದ್ಧ ಶಾಂತರೀತಿಯ ಪ್ರತಿಭಟನೆ ನಡೆಸುವ ಜನರ ಹಕ್ಕನ್ನು ಗೌರವಿಸಲಾಗುವುದು ಎಂದು ಹೇಳಿರುವ ಶ್ರೀಲಂಕಾ ಅಧ್ಯಕ್ಷ ಗೊತಬಯ ರಾಜಪಕ್ಸ, ಗೋಲೀಬಾರ್ ಬಗ್ಗೆ ತಾರತಮ್ಯ ರಹಿತ ಮತ್ತು ಪಾರದರ್ಶಕ ತನಿಖೆ ನಡೆಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News