×
Ad

ಸರ್ಕಾರದ ನೆರವಿನೊಂದಿಗೆ ಮಾರುಕಟ್ಟೆಗೆ ಬರಲಿವೆ ತುಳುನಾಡ ಆಟಿಕೆಗಳು

Update: 2022-04-21 08:24 IST
ಸಾಂದರ್ಭಿಕ ಚಿತ್ರ

ಮಂಗಳೂರು: ಕಂಬಳ ಮತ್ತು ಯಕ್ಷಗಾನ ಸೇರಿದಂತೆ ತುಳುನಾಡು ಸಂಸ್ಕೃತಿ ಮತ್ತು ಕಲೆಯನ್ನು ಬಿಂಬಿಸುವ, ಪೇಪರ್ ಪಲ್ಪ್ ನಿಂದ ತಯಾರಿಸಲ್ಪಟ್ಟ ಆಟಿಕೆಗಳು, ಮಂಗಳೂರು ಟಾಯ್ಸ್ ಫ್ರಮ್ ಪೇಪರ್ ಸೀಡ್ ಬ್ರಾಂಡ್‍ನಲ್ಲಿ ಸರ್ಕಾರದ ನೆರವಿನೊಂದಿಗೆ ಶೀಘ್ರವೇ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಂದು times of india ವರದಿ ಮಾಡಿದೆ.

"ಒಂದು ವರ್ಷಕ್ಕೂ ಅಧಿಕ ಕಾಲದಿಂದ ಚನ್ನಪಟ್ಟಣ ಆಟಿಕೆಗಳ ಮಾದರಿಯಲ್ಲಿ ಮಂಗಳೂರು ಟಾಯ್ಸ್ ಪ್ರಾಜೆಕ್ಟ್ ಬಗ್ಗೆ ನಾವು ಕಾರ್ಯೋನ್ಮುಖರಾಗಿದ್ದೇವೆ. ಈ ಮೊದಲು ಕೆಲ ಆಟಿಕೆಗಳನ್ನು ಬಿಡುಗಡೆ ಮಾಡಲಾಗಿತ್ತು. ಆದಾಗ್ಯೂ ಇದೀಗ ತುಳುನಾಡು ಸಂಸ್ಕೃತಿಯನ್ನು ಬಿಂಬಿಸುವ ಆಟಿಕೆಗಳ ಮೇಲಷ್ಟೇ ಗಮನ ಹರಿಸಲಾಗಿದೆ. ನಾವು ಕೇವಲ ನೈಸರ್ಗಿಕ ಬಣ್ಣವನ್ನಷ್ಟೇ ಬಳಸುವ ಜತೆಗೆ ಯಾವುದೇ ಪ್ಲಾಸ್ಟಿಕ್ ಬಳಸುತ್ತಿಲ್ಲ. ಕಳೆದ ಆರು ತಿಂಗಳಲ್ಲಿ ಸರ್ಕಾರಿ ನೆರವಿನೊಂದಿಗೆ ನಾವು, ಕಂಬಳ, ಯಕ್ಷಗಾನ ಮತ್ತು ಈ ಭಾಗದ ಇತರ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಬಿಂಬಿಸುವ ಹಲವು ವಿನ್ಯಾಸಗಳನ್ನು ರೂಪಿಸುತ್ತಿದ್ದೇವೆ" ಎಂದು ಪೇಪರ್ ಸೀಡ್ ಸಂಸ್ಥಾಪಕ ನಿತಿನ್ ವಾಸ್ ಹೇಳಿದರು.

"ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ (ಎಂಎಸ್‍ಎಂಇ) ಸಚಿವಾಲಯದ ಅಭಿವೃದ್ಧಿ ಆಯುಕ್ತರ ಕಚೇರಿಯ ವಿನ್ಯಾಸ ಯೋಜನೆಯ ಅನುಷ್ಠಾನಗೊಳಿಸುವ ಹೊಣೆ ಎನ್‍ಐಟಿಕೆಗೆ ಸೇರಿದೆ. ವಿನ್ಯಾಸ ಪರಿಣತಿ ಯೋಜನೆಯು ಉತ್ಪಾದನಾ ಘಟಕವನ್ನು ಘೋಷಿಸಿದ ತಕ್ಷಣ ಎನ್‍ಐಟಿಕೆಯ ಸೆಂಟರ್ ಫಾರ್ ಸಿಸ್ಟಮ್ಸ್ ಡಿಸೈನ್ ಅನ್ನು ಮೆಕ್ಯಾನಿಕಲ್ ಎಂಜಿನಿಯರ್ ಪ್ರೊ.ಗಂಗಾಧರನ್ ಹಾಗೂ ಎನ್‍ಐಟಿಕೆ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್‍ನ ಸಹಾಯಕ ಪ್ರೊ. ಬಿಜುನಾ ಅವರನ್ನು ಸಂಯೋಜಕರನ್ನಾಗಿ ನೇಮಿಸಿ ಎನ್‍ಐಟಿಕೆಯನ್ನು ಅನುಷ್ಠಾನ ಏಜೆನ್ಸಿಯಾಗಿ ನೇಮಕ ಮಾಡಲಾಗಿತ್ತು" ಎಂದು ಎನ್‍ಐಟಿಕೆ ಸಹಾಯಕ ಪ್ರೊ. ಬಿಜುನಾ ಸಿ ಮೋಹನ್ ಹೇಳಿದರು.

ಇದರ ಮೂಲಕ ಪೇಪರ್ ಸೀಡ್ ಸಂಸ್ಥೆಗೆ ಮಾನ್ಯತೆ ನೀಡಿ, ವಿನ್ಯಾಸಕ್ಕೆ ಹಣಕಾಸು ನೆರವು ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಮೂಲಕ ಈ ಯೋಜನೆಗೆ ವಿನ್ಯಾಸಗಾರರನ್ನು ಆಯ್ಕೆ ಮಾಡಲಾಗಿದೆ. ವಿನ್ಯಾಸವನ್ನು ದೃಢಪಡಿಸಿದ ಬಳಿಕ, ಮೌಲ್ಡ್ ಮತ್ತು ಮಾದರಿ ಸಿದ್ಧಪಡಿಸುವುದು ಸೇರಿದಂತೆ ವಿವಿಧ ಹಂತಗಳ ಪ್ರಕ್ರಿಯೆ ನಡೆಯಲಿದೆ. ಶೇಕಡ 25ರಷ್ಟು ವಿನ್ಯಾಸ ವೆಚ್ಚವನ್ನು ಈ ಘಟಕ ಭರಿಸುತ್ತದೆ ಹಾಗೂ ಉಳಿತ ಮೊತ್ತವನ್ನು ಎನ್‍ಐಟಿಕೆ ಮೂಲಕ ಸಚಿವಾಲಯ ನೀಡುತ್ತದೆ" ಎಂದು ವಿವರಿಸಿದರು.

ಪರಿಸರ ಸ್ನೇಹಿ ಆಭರಣಗಳು, ಕಿವಿಯೋಲೆ, ಕೀ ಚೈನ್, ಲೋಟ, ತೆಂಗಿನ ಚಿಪ್ಪಿನ ಕಪ್, ಡ್ರಿಫ್ಟ್ ವುಡ್ ಶಿಲ್ಪಗಳು, ಸ್ಥಳೀಯ ಲಭ್ಯ ಬಳ್ಳಿಗಳಿಂದ ಬಾಸ್ಕೆಟ್‍ಗಳು, ಸೀಡ್ ಪೆನ್, ಬಿದಿರಿನ ಟೂಥ್‍ಬ್ರೆಷ್, ವಿನ್ಯಾಸದ ಪೇಪರ್ ಪಲ್ಪ್, ಕಾಗದದ ಕೊಳವೆ, ಮರುಬಳಕೆಯ ಪೇಪರ್ ಕಾರ್ಡ್, ನ್ಯೂಸ್‍‌ ಪೇಪರ್ ಸೀಡ್ ಪೆನ್ಸಿಲ್, ಸಾವಯವ ಅಗರಬತ್ತಿಗಳನ್ನು ಪೇಪರ್‌ ಸೀಡ್ ಉತ್ಪಾದಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News