×
Ad

ಮುಂದಿನ ಆದೇಶದವರೆಗೆ ಜಹಾಂಗೀರ್‌ ಪುರಿಯಲ್ಲಿ ಯಾವುದೇ ಕಟ್ಟಡ ನೆಲಸಮಗೊಳಿಸುವಂತಿಲ್ಲ: ಸುಪ್ರೀಂಕೋರ್ಟ್

Update: 2022-04-21 12:12 IST

ಹೊಸದಿಲ್ಲಿ: ದಿಲ್ಲಿಯ ಜಹಾಂಗೀರ್‌ಪುರಿಯಲ್ಲಿ  ಕಟ್ಟಡ ಧ್ವಂಸ ಕಾರ್ಯಾಚರಣೆ  ಕುರಿತು ಗುರುವಾರ ಯಥಾಸ್ಥಿತಿಗೆ ಆದೇಶಿಸಿರುವ ಸುಪ್ರೀಂ ಕೋರ್ಟ್ ಮುಂದಿನ ಆದೇಶದವರೆಗೆ ಜಹಾಂಗೀರ್ಪುರಿಯಲ್ಲಿ ಯಾವುದೇ ಧ್ವಂಸ ಕಾರ್ಯಾಚರಣೆ ನಡೆಸುವಂತಿಲ್ಲ ಎಂದಿದೆ ಹಾಗೂ ನಗರಪಾಲಿಕೆ ಅಧಿಕಾರಿಗಳಿಗೆ ನೋಟಿಸ್ ನೀಡಿದೆ.

"ಸುಪ್ರೀಂಕೋರ್ಟ್ ತೀರ್ಪನ್ನು ಮೇಯರ್‌ಗೆ ತಿಳಿಸಿದ ನಂತರ ನಡೆದ ಎಲ್ಲಾ ಉರುಳಿಸುವಿಕೆಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ" ಎಂದು ಹೇಳಿದ ಸುಪ್ರೀಂ ಕೋರ್ಟ್ ಎರಡು ವಾರಗಳ ನಂತರ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.

ಕಳೆದ ಶನಿವಾರ ಹನುಮ ಜಯಂತಿ ಸಂದರ್ಭದಲ್ಲಿ ಕೋಮುಗಲಭೆ ಭುಗಿಲೆದ್ದ ದಿಲ್ಲಿಯ ಜಹಾಂಗೀರ್‌ಪುರಿ ನೆರೆಹೊರೆಯಲ್ಲಿ ಕಟ್ಟಡ ನೆಲಸಗೊಳಿಸಲು ಬುಲ್ಡೋಜರ್‌ಗಳನ್ನು ಕಳುಹಿಸಿದ ಒಂದು ದಿನದ ನಂತರ ನೆಲಸಮ ಕುರಿತ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಲ್‌.ಎನ್. ರಾವ್ ಮತ್ತು ಬಿ.ಆರ್. ಗವಾಯಿ ಅವರ ಸುಪ್ರೀಂ ಕೋರ್ಟ್ ಪೀಠವು ಗುರುವಾರ ಆರಂಭಿಸಿತು.

ಬಿಜೆಪಿ ಆಡಳಿತವಿರುವ ಉತ್ತರ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಅತಿಕ್ರಮಣ ವಿರೋಧಿ ಅಭಿಯಾನದ ಭಾಗವಾಗಿ ಮಸೀದಿಯೊಂದರ ಸಮೀಪವಿರುವ ಹಲವಾರು ಕಾಂಕ್ರೀಟ್ ಹಾಗೂ  ತಾತ್ಕಾಲಿಕ ಕಟ್ಟಡಗಳನ್ನು ಬುಧವಾರ ಬೆಳಿಗ್ಗೆ ನೆಲಸಮಗೊಳಿಸಲಾಯಿತು. ಕಟ್ಟಡ ನೆಲಸಮದ ವಿರುದ್ಧ ಜಮಿಯತ್ ಉಲೇಮಾ-ಎ-ಹಿಂದ್ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ನಂತರ ನೆಲಸಮ ಅಭಿಯಾನವನ್ನು ನಿಲ್ಲಿಸಲು ಸುಪ್ರೀಂ ಕೋರ್ಟ್ ಎರಡು ಬಾರಿ ಮಧ್ಯಪ್ರವೇಶಿಸಬೇಕಾಯಿತು.

ಇಂದು ವಿಚಾರಣೆಯ ಸಂದರ್ಭದಲ್ಲಿ "ಸಮಾಜದ ನಿರ್ದಿಷ್ಟ ವರ್ಗವನ್ನು ಗುರಿಯಾಗಿಸಲಾಗುತ್ತಿದೆ" ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಯಿತು.

ದಿಲ್ಲಿ  ಬಿಜೆಪಿ ಅಧ್ಯಕ್ಷರು ಉತ್ತರ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಮೇಯರ್‌ಗೆ ದೂರು ನೀಡಿದ ನಂತರ ಹಿಂಸಾಚಾರ ಪೀಡಿತ ಪ್ರದೇಶದಿಂದ ಅತಿಕ್ರಮಣಗಳನ್ನು ತೆಗೆದು ಹಾಕಲು ರಾತ್ರೋರಾತ್ರಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಹಾಗೂ ಪೂರ್ವ ಸೂಚನೆ ನೀಡದೆ ಧ್ವಂಸ ಕಾರ್ಯಾಚರಣೆ  ಆರಂಭಿಸಲಾಯಿತು ಎಂದು ಜಹಾಂಗೀರ್‌ಪುರಿ ಪ್ರದೇಶದ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ ಅವರು   ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News