"ಆಝಾನ್ ಸಂದರ್ಭ ಧ್ವನಿವರ್ಧಕಗಳಲ್ಲಿ ಭಜನೆ ನುಡಿಸುವಂತಿಲ್ಲ" ಎಂಬ ಆದೇಶ ಹೊರಡಿಸಿದ್ದ ಪೊಲೀಸ್ ಆಯುಕ್ತರ ವರ್ಗಾವಣೆ
ಹೊಸದಿಲ್ಲಿ: ಮಸೀದಿಯೊಂದರ 100 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಆಝಾನ್‍ಗಿಂತ 15 ನಿಮಿಷ ಮೊದಲು ಹಾಗೂ ನಂತರ ಯಾರಿಗೂ ಧ್ವನಿವರ್ಧಕಗಳಲ್ಲಿ ಭಜನೆಗಳನ್ನು ಅಥವಾ ಹಾಡುಗಳನ್ನು ಹಾಕಲು ಅನುಮತಿಸಲಾಗುವುದಿಲ್ಲ ಎಂದು ಎರಡು ದಿನಗಳ ಹಿಂದೆಯಷ್ಟೇ ಸೂಚನೆ ನೀಡಿದ್ದ ನಾಸಿಕ್ ಪೊಲೀಸ್ ಆಯುಕ್ತ ದೀಪಕ್ ಪಾಂಡೆ ಅವರನ್ನು ವರ್ಗಾಯಿಸಲಾಗಿದೆ.
ಎಪ್ರಿಲ್ 18ರಂದು ಮೇಲಿನಂತೆ ಆದೇಶ ಹೊರಡಿಸಿದ್ದ ಪಾಂಡೆ ಅವರು ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಪತ್ರಗಳನ್ನೂ ಬರೆದು ಧ್ವನಿವರ್ಧಕಗಳ ಬಳಕೆಗೆ ಅನುಮತಿಯನ್ನು ಮೇ. 3ರೊಳಗೆ ಪಡೆಯುವಂತೆ ಸೂಚಿಸಿದ್ದರಲ್ಲದೆ ನಿಯಮ ಪಾಲಿಸದ ಧಾರ್ಮಿಕ ಸ್ಥಳಗಳು ಕಾನೂನು ಕ್ರಮ ಎದುರಿಸಲಿವೆ ಎಂದೂ ಎಚ್ಚರಿಸಿದ್ದರು. "ಪ್ರತಿಯೊಂದು ಚರ್ಚ್, ದೇವಸ್ಥಾನ, ಗುರುದ್ವಾರ ಅಥವಾ ಮಸೀದಿ" ಧ್ವನಿವರ್ಧಕಗಳ ಬಳಕೆಗೆ ನಾಸಿಕ್ ಪೊಲೀಸ್ ಆಯುಕ್ತಾಲಯಕ್ಕೆ ಅರ್ಜಿ ಸಲ್ಲಿಸಬೇಕೆಂದೂ ಅವರು ಹೇಳಿದ್ದರು.
ಆಝಾನ್ ಕರೆ ನೀಡಲು ಮಸೀದಿಗಳಲ್ಲಿರುವ ಧ್ವನಿವರ್ಧಕಗಳನ್ನು ತೆಗೆಸಬೇಕು, ಮೇ 3ರೊಳಗೆ ಈ ಆದೇಶ ಪಾಲನೆಯಾಗದೇ ಇದ್ದರೆ ಧ್ವನಿವರ್ಧಕಗಳನ್ನು ಬಳಸಿ ಹನುಮಾನ್ ಚಾಲೀಸಾ ನುಡಿಸಲಾಗುವುದು ಎಂದು ಮಹಾರಾಷ್ಟ್ರ ನವನಿರ್ಮಾಣ್ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಅವರ ಎಚ್ಚರಿಕೆ ನಂತರ ಪಾಂಡೆ ತಮ್ಮ ಆದೇಶ ಹೊರಡಿಸಿದ್ದರು.
ಕಂದಾಯ ಅಧಿಕಾರಿಗಳು ನಾಗರಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಹಾಗೂ ರಾಜ್ಯದ ಭೂ ಮಾಫಿಯಾಗೆ ಬೇಕಾದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇತ್ತೀಚೆಗಷ್ಟೇ ಪಾಂಡೆ ಅವರು ಮಹಾರಾಷ್ಟ್ರ ಡಿಜಿಪಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೂ ಅವರ ವರ್ಗಾವಣೆಗೂ ನಂಟು ಇರಬಹುದೆಂದು ಹೇಳಲಾಗುತ್ತಿದೆ.
ಪಾಂಡೆ ಅವರನ್ನು ಮಹಿಳೆಯರ ವಿರುದ್ಧದ ದೌರ್ಜನ್ಯ ತಡೆ ವಿಭಾಗದ ವಿಶೇಷ ಐಜಿ ಆಗಿ ನೇಮಿಸಲಾಗಿದೆ.