ಜಹಾಂಗೀರ್‌ಪುರಿ ಬುಲ್ಡೋಜರ್ ಕಾರ್ಯಾಚರಣೆ: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬೃಂದಾ ಕಾರಟ್
ಹೊಸದಿಲ್ಲಿ: ಕಳೆದ ಶನಿವಾರ ಹನುಮಾನ್ ಜಯಂತಿ ಮೆರವಣಿಗೆ ಸಂದರ್ಭ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಜಹಾಂಗೀರ್‍ಪುರಿ ಪ್ರದೇಶದಲ್ಲಿ ಬುಧವಾರ ಸುಪ್ರೀಂ ಕೋರ್ಟ್ ತಡೆಯಾಜ್ಞೆಯ ಹೊರತಾಗಿಯೂ ನಡೆಯುತ್ತಿದ್ದ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಳಕ್ಕೆ ಆಗಮಿಸಿ ಬುಲ್‍ಡೋಜರ್ ಮುಂದೆ ನಿಂತು ಕೋರ್ಟ್ ಆದೇಶದ ಪ್ರತಿಯನ್ನು ತೋರಿಸಿದ್ದ ಸಿಪಿಐಎಂ ನಾಯಕಿ ಬೃಂದಾ ಕಾರಟ್ ಇಂದು ಸುಪ್ರೀಂ ಕೋರ್ಟಿನ ಕದ ತಟ್ಟಿದ್ದಾರೆ.
ತಾವು ಬುಧವಾರ ಬೆಳಿಗ್ಗೆ 10.45ಕ್ಕೆ ಜಹಾಂಗೀರ್‍ಪುರಿಗೆ ತೆರಳಿ ಯಥಾಸ್ಥಿತಿ ಕಾಪಾಡುವಂತೆ ಕೋರ್ಟ್ ಆದೇಶದ ಕುರಿತು ತಿಳಿಸಿದರೂ ಕಾರ್ಯಾಚರಣೆ ಕನಿಷ್ಠ 12.45ರ ತನಕ ಮುಂದುವರಿದಿತ್ತು ಎಂದು ಬೃಂದಾ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಒತ್ತುವರಿ ತೆರವು ಕಾರ್ಯಾಚರಣೆಯ ನೆಪದಲ್ಲಿ ಒಂದು ತಾರತಮ್ಯಕಾರಿ ನೆಲಸಮ ಕಾರ್ಯಾಚರಣೆಯನ್ನು ಮತೀಯ ರಾಜಕೀಯ ಆಟದ ಭಾಗವಾಗಿ ನಡೆಸಲಾಗುತ್ತಿದೆ ಎಂದು ಬೃಂದಾ ಹೇಳಿದ್ದಾರೆ.
ಈ ಕಾರ್ಯಾಚರಣೆ ಅಮಾನವೀಯ, ಅಕ್ರಮ ಮತ್ತು ಅನೈತಿಕ ಎಂದು ಬಣ್ಣಿಸಿರುವ ಬೃಂದಾ, ಜನರ ಜೀವಿಸುವ ಹಕ್ಕು, ಉದ್ಯೋಗ ಪಡೆಯುವ ಹಾಗೂ ಆಶ್ರಯ ಹೊಂದುವ ಹಕ್ಕನ್ನು ಉಲ್ಲಂಘಿಸಲಾಗಿದೆ, ಒತ್ತುವರಿ ಆದೇಶವನ್ನು ರದ್ದುಗೊಳಿಸುವ ಜೊತೆಗೆ ಸಂತ್ರಸ್ತರಿಗೆ ಪರಿಹಾರ ನಿಗದಿಪಡಿಸಿ ಒಂದು ನಿರ್ದಿಷ್ಟ ಸಮಯಮಿತಿಯೊಳಗೆ ಸರಕಾರಕ್ಕೆ ಪರಿಹಾರ ನೀಡಬೇಕಾಗಿ ಆದೇಶಿಸಬೇಕು ಎಂದು ಬೃಂದಾ ತಮ್ಮ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.