ಭಾರತಕ್ಕೆ ಈಗ ವಿದ್ಯುತ್ ಕೊರತೆಯ ಬರಸಿಡಿಲು

Update: 2022-04-21 16:31 GMT

ಹೊಸದಿಲ್ಲಿ,ಎ.21: ಬೇಸಿಗೆಯ ಧಗೆ ಈಗಾಗಲೇ ಅಸಹನೀಯವಾಗಿದೆ, ಇದರೊಂದಿಗೆ ದೇಶಾದ್ಯಂತ ವಿವಿಧ ಭಾಗಗಳಲ್ಲಿ ಕಲ್ಲಿದ್ದಲಿನ ತೀವ್ರ ಕೊರತೆಯು ವಿದ್ಯುತ್ ಕಡಿತಗಳಿಗೆ ಕಾರಣವಾಗುತ್ತಿದೆ. ಇದು ಏಶ್ಯದ ಮೂರನೇ ಅತ್ಯಂತ ದೊಡ್ಡ ಆರ್ಥಿಕತೆಗೆ ಹಿನ್ನಡೆಯನ್ನುಂಟು ಮಾಡಬಲ್ಲ ಹೊಸ ವಿದ್ಯುತ್ ಬಿಕ್ಕಟ್ಟಿನ ಭೀತಿಯನ್ನು ಸೃಷ್ಟಿಸಿದೆ.

ವಿದ್ಯುತ್ ಗೆ ಬೇಡಿಕೆ ಹೆಚ್ಚಿರುವುದರಿಂದ ಉತ್ತರದಲ್ಲಿ ಪಂಜಾಬ್ ಮತ್ತು ಉತ್ತರ ಪ್ರದೇಶ ಹಾಗೂ ದಕ್ಷಿಣದಲ್ಲಿ ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳು ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸುತ್ತಿವೆ. ಕೆಲವು ಕಡೆಗಳಲ್ಲಿ ಎಂಟು ಗಂಟೆಗಳಷ್ಟು ದೀರ್ಘ ವಿದ್ಯುತ್ ಕಡಿತದಿಂದಾಗಿ ಜನರು ಸೆಕೆಯನ್ನು ಸಹಿಸಿಕೊಳ್ಳುವ ಅಥವಾ ಜನರೇಟರ್ ಗಳಂತಹ ದುಬಾರಿ ಪರ್ಯಾಯಗಳತ್ತ ಗಮನ ಹರಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ವಿದ್ಯುತ್ ಕಣ್ಣುಮುಚ್ಚಾಲೆ ಭಾರತದಲ್ಲಿ ಹೊಸದೇನಲ್ಲವಾದರೂ ಈ ವರ್ಷದ ಸ್ಥಿತಿಯು ನಿರ್ದಿಷ್ಟವಾಗಿ ಸಂಭಾವ್ಯ ವಿದ್ಯುತ್ ಬಿಕ್ಕಟ್ಟನ್ನು ಸೂಚಿಸುತ್ತದೆ ಎಂದು ಆಲ್ ಇಂಡಿಯಾ ಪವರ್ ಇಂಜಿನಿಯರ್ಸ್ ಫೆಡರೇಷನ್ ಅಧ್ಯಕ್ಷ ಶೈಲೇಂದ್ರ ದುಬೆ ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಕಲ್ಲಿದ್ದಲು ಬಳಸಿ ಶೇ.70ರಷ್ಟು ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತಿದೆ ಮತ್ತು ಕಲ್ಲಿದ್ದಲಿನ ಕೊರತೆಯಿಂದಾಗಿ ವಿದ್ಯುತ್ ಕಡಿತಗಳು ಸಾಂಕ್ರಾಮಿಕದಿಂದಾಗಿ ತೀವ್ರವಾಗಿ ಕುಸಿದಿದ್ದ 2.7 ಲಕ್ಷ ಕೋಟಿ ಡಾ.ಗಳ ಆರ್ಥಿಕತೆಯ ಪೂರ್ಣ ಪ್ರಮಾಣದ ಚೇತರಿಕೆಗೆ ಬೆದರಿಕೆಯನ್ನೊಡ್ಡಿವೆ. ಉಕ್ರೇನ್ ನಲ್ಲಿ ರಶ್ಯದ ಆಕ್ರಮಣದಿಂದಾಗಿ ಹೆಚ್ಚುತ್ತಿರುವ ಇಂಧನ ಬೆಲೆಗಳನ್ನು ನಿಯಂತ್ರಿಸಲು ನೀತಿ ರೂಪಕರು ಪರದಾಡುತ್ತಿರುವ ಸಮಯದಲ್ಲಿಯೇ ವಿದ್ಯುತ್ ಕಡಿತಗಳು ಹೊಸ ಸವಾಲುಗಳನ್ನು ಒಡ್ಡುತ್ತಿವೆ.

 ಲೋಹಗಳು, ಮಿಶ್ರಲೋಹಗಳು ಮತ್ತು ಸಿಮೆಂಟ್ ತಯಾರಕರು ಸೇರಿದಂತೆ ಸಣ್ಣ ಮತ್ತು ದೊಡ್ಡ ಉದ್ಯಮಗಳೆಂಬ ಭೇದವಿಲ್ಲದೆ ಬಿಗಿಯಾಗಿರುವ ದೇಶಿಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಶಕ್ತಿಗಾಗಿ ಹೆಚ್ಚು ವೆಚ್ಚ ಮಾಡಬೇಕಾದ ಸ್ಥಿತಿಯಲ್ಲಿವೆ. ನಿರಂತರ ಕಲ್ಲಿದ್ದಲು ಕೊರತೆಯು ದೇಶದ ಕೈಗಾರಿಕಾ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾವನ್ನುಂಟು ಮಾಡಬಹುದು ಮತ್ತು ಇನ್ನೊಂದು ‘ಸ್ಥಗಿತೀಕರಣದ ಆಘಾತ’ವನ್ನುಂಟು ಮಾಡಬಹುದು ಎಂದು ಜಪಾನಿನ ಬ್ಯಾಂಕಿಂಗ್ ಸಂಸ್ಥೆ ನೋಮುರಾ ಹೋಲ್ಡಿಂಗ್ಸ್ ಇಂಕ್ ಅಭಿಪ್ರಾಯ ವ್ಯಕ್ತಪಡಿಸಿದೆ.ಬೇಡಿಕೆ ಮತ್ತು ಪೂರೈಕೆ ಹೀಗೆ ಎರಡೂ ಕಡೆಗಳ ಅಂಶಗಳು ಹೊಣೆಯಾಗಿವೆ. ಉದ್ಯಮಗಳ ಪುನರಾರಂಭದೊಂದಿಗೆ ಮತ್ತು ಕಡು ಬೇಸಿಗೆಯಿಂದಾಗಿ ವಿದ್ಯುತ್ ಗೆ ಬೇಡಿಕೆ ಹೆಚ್ಚಾಗಿದೆ, ಆದರೆ ಕಲ್ಲಿದ್ದಲುಗಳ ಸಾಗಾಟಕ್ಕೆ ರೈಲ್ವೆ ವ್ಯಾಗನ್ ಗಳ ಕೊರತೆ ಮತ್ತು ಕುಸಿದಿರುವ ಕಲ್ಲಿದ್ದಲು ಆಮದುಗಳಿಂದಾಗಿ ಪೂರೈಕೆಗೆ ತೊಡಕುಂಟಾಗಿದೆ ಎಂದು ಸೋನಾಲ ವರ್ಮಾ ನೇತೃತ್ವದ ನೋಮುರಾದ ಅರ್ಥಶಾಸ್ತ್ರಜ್ಞರು ಎ.19ರ ಸಂಶೋಧನಾ ಟಿಪ್ಪಣಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News