ಹಿರಿಯ ಪತ್ರಕರ್ತ ಅಜಿತ್‌ ಅಂಜುಮ್‌ ಖಾತೆಗೆ ಟ್ವಿಟರ್‌ ನಿರ್ಬಂಧ: ಗಣ್ಯರಿಂದ ತರಾಟೆ

Update: 2022-04-21 14:43 GMT
Photo: twitter/SanketRaje45

ಹೊಸದಿಲ್ಲಿ: ಹಿರಿಯ ಪತ್ರಕರ್ತ ಅಜಿತ್‌ ಅಂಜುಮ್‌ ಅವರ ಖಾತೆಯನ್ನು ಟ್ವಿಟರ್‌ ನಿರ್ಬಂಧಿಸಿದ್ದು, ಅಂಜುಮ್‌ ತನ್ನ ಟ್ವಿಟರ್ ಖಾತೆಗೆ ಪ್ರವೇಶವನ್ನು ನೀಡುತ್ತಿಲ್ಲ ಎಂದು ಅವರ ಫೇಸ್‌ಬುಕ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕರೋನಾ ಸಂದರ್ಭದಲ್ಲಿ ಆಮ್ಲಜನಕ ಮತ್ತು ಹಾಸಿಗೆಗಳ ಅವಶ್ಯಕತೆ ಇರುವ ರೋಗಿಗಳ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕಗೊಳಿಸಿದ್ದಾರೆಂದು ಆರೋಪಿಸಿ ಅವರ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ಅಂಜುಮ್‌ ಆರೋಪಿಸಿದ್ದಾರೆ.

“ನಾನು ಕರೋನಾ ಅವಧಿಯಲ್ಲಿ ಕೆಲವು ಜನರ ಹೆಸರು ಮತ್ತು ವಿಳಾಸಗಳನ್ನು ನೀಡುವ ಮೂಲಕ ಆಮ್ಲಜನಕ ಮತ್ತು ಹಾಸಿಗೆಗಳಿಗಾಗಿ ವಿನಂತಿಸಿದ್ದೆ. ಇದೀಗ, ಅದನ್ನೇ ಕಾರಣವಾಗಿಟ್ಟುಕೊಂಡು, ಖಾಸಗಿ ಮಾಹಿತಿಯನ್ನು ಹಂಚಿದ್ದೇನೆ ಎಂದು ಟ್ವಿಟರ್‌ ನನ್ನ ಖಾತೆಯನ್ನು ನಿರ್ಬಂಧಿಸಿದೆ. ಸಹಾಯದ ಅಗತ್ಯ ಇರುವವರ ಮಾಹಿತಿ ಹಂಚಿಕೊಳ್ಳದೆ ಅವರಿಗೆ ಸಹಾಯ ಒದಗಿಸುವುದು ಹೇಗೆ?” ಎಂದು ಅಂಜುಮ್‌ ಪ್ರಶ್ನಿಸಿದ್ದಾರೆ.

“ನನ್ನ ಧ್ವನಿಯಿಂದ ಅನಾನುಕೂಲವಾಗಿರುವ ಜನರು ಈ ದೂರನ್ನು ಟ್ವಿಟರ್‌ಗೆ ನಿರಂತರವಾಗಿ ನೀಡಿರಬೇಕು. ಇಲ್ಲದಿದ್ದರೆ, ಒಂದು ವರ್ಷದ ನಂತರ, ಟ್ವಿಟರ್ ಇದ್ದಕ್ಕಿದ್ದಂತೆ ನೆನಪಿಸಿಕೊಳ್ಳುತ್ತಿರಲಿಲ್ಲ. ಆಶ್ಚರ್ಯವೆಂದರೆ ಇದನ್ನೇ ಆಧಾರವಾಗಿಟ್ಟುಕೊಂಡು ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಿದೆ. ಹಾಗೆ ಮಾಡಬೇಕಿದ್ದರೆ, ಐವತ್ತರಷ್ಟು ಸಂಸದರು, ಶಾಸಕರು, ನೂರಾರು ಪತ್ರಕರ್ತರು, ಸಾವಿರಾರು ಜನರ ಖಾತೆಗಳನ್ನು ಕೂಡಾ ನಿರ್ಬಂಧಿಸಬೇಕಿತ್ತು. “ ಎಂದು ಅಂಜುಮ್‌ ಬರೆದಿದ್ದಾರೆ.

ಅಂಜುಮ್‌ ಖಾತೆಯನ್ನು ಟ್ವಿಟರ್‌ ನಿರ್ಬಂಧಿಸಿದೆ ಎಂದು ತಿಳಿಯುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದು, #TwitterUnlockAjitAnjum ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಅಭಿಯಾನ ಮಾಡಿದ್ದಾರೆ.  ಅಂಜುಮ್‌ ಅವರ ಖಾತೆಯನ್ನು ಮರುಸ್ಥಾಪಿಸಲು ಟ್ವಿಟರ್‌ ಇಂಡಿಯಾಗೆ ಒತ್ತಾಯಿಸಿರುವ ನೆಟ್ಟಿಗರು, ಕರೋನಾ ಸಮಯದಲ್ಲಿ ಒಬ್ಬರಿಗೆ ಸಹಾಯ ಮಾಡಿದ ಕಾರಣಕ್ಕೆ ಟ್ವಿಟರ್‌ ಖಾತೆಯನ್ನು ನಿರ್ಬಂಧಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಧ್ವೇಷವನ್ನು ಹರಡುವ ಬಲಪಂಥೀಯ ಖಾತೆಗಳನ್ನು ಟ್ವಿಟರ್‌ ನಿಗ್ರಹಿಸದೆ ಪತ್ರಕರ್ತರ ಹಾಗೂ ಜನರಿಗೆ ಸಹಾಯ ಮಾಡುವ ವ್ಯಕ್ತಿಗಳ  ಟ್ವಿಟರ್‌ ಖಾತೆಯನ್ನು ನಿಗ್ರಹಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಎದ್ದಿದೆ.

ಈ ಸುದ್ದಿಗೆ ಪ್ರತಿಕ್ರಿಯಿಸಿರುವ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಅವರು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. " ನೀವು ಟ್ವಿಟರ್ ಅನ್ನು ಖರೀದಿಸುತ್ತೀರಿ ಎಂದು ಸುದ್ದಿಯಿದೆ. ಮಹಾರಾಜ್, ಆದಷ್ಟು ಬೇಗ ಅದನ್ನು ಖರೀದಿಸಿ. ಖರೀದಿಸಿದ ಕೂಡಲೇ ಅಜಿತ್ ಅಂಜುಮ್ ಅವರ ಟ್ವಿಟರ್ ಖಾತೆಯನ್ನು ಅನ್ ಬ್ಲಾಕ್ ಮಾಡಿಬಿಡಿ. ಅದೇನು ನಿಮಗೆ ದೊಡ್ಡ ಕೆಲಸವೇ ಅಲ್ಲ. ನೀವೂ ಇದಕ್ಕೆಲ್ಲ ಹೆದರಿದರೆ ಇಷ್ಟೆಲ್ಲಾ ದುಡ್ಡು ಸಂಪಾದಿಸಿಯೂ ಏನು ಪ್ರಯೋಜನ ? " ಎಂದು ರವೀಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

“ಆತ್ಮೀಯ ಸಹೋದರ ಅಜಿತ್‌ ಅಂಜುಮ್ ಅವರ ಟ್ವಿಟರ್ ಖಾತೆಯು 2 ವಾರಗಳಿಂದ ಲಾಕ್ ಆಗಿದೆ. ಅಜಿತ್ ಮಾಡಿದ ಗಂಭೀರ ಅಪರಾಧವೆಂದರೆ ಅವರು ಕರೋನಾ ಸಮಯದಲ್ಲಿ ನೂರಾರು ಜನರಿಗೆ ಸಹಾಯ ಮಾಡಲು ಟ್ವೀಟ್ ಮಾಡಿರುವುದು ಮತ್ತು ಅವರ ಮಾಹಿತಿಯನ್ನು ಹಂಚಿಕೊಂಡಿರುವುದು.‌ #TwitterUnlockAjitAnjum ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ದಯವಿಟ್ಟು ಇದರ ವಿರುದ್ಧ ನಿಮ್ಮ ಧ್ವನಿಯನ್ನು ಎತ್ತಿ” ಎಂದು ಲೇಖಕ ಅಶೋಕ್‌ ಕುಮಾರ್‌ ಪಾಂಡೆ ಟ್ವೀಟ್‌ ಮಾಡಿದ್ದಾರೆ.

 ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ವಿವೇಕಯುತ ಮತ್ತು ಜನರ ಪರವಾದ ಧ್ವನಿಗಳನ್ನು ನಿಗ್ರಹಿಸುವುದು ಸರ್ವಾಧಿಕಾರವನ್ನು ಕಾನೂನುಬದ್ಧಗೊಳಿಸುವ ಮೊದಲ ಹೆಜ್ಜೆಯಾಗಿದೆ. ಹಿರಿಯ ಪತ್ರಕರ್ತ ಅಜಿತ್ ಅಂಜುಮ್‌ ಅವರ ಟ್ವಿಟ್ಟರ್ ಖಾತೆಯನ್ನು ನಿರ್ಬಂಧಿಸಿರುವುದು ಸಂಪೂರ್ಣವಾಗಿ ಅಸಮರ್ಥನೀಯವಾಗಿದೆ. ಟ್ವಿಟರ್‌ ಇಂಡಿಯಾ ಆದಷ್ಟು ಬೇಗ‌ ಅವರ (ಅಜಿತ್‌ ಅಂಜುಮ್) ಖಾತೆಯನ್ನು ಮರುಸ್ಥಾಪಿಸಬೇಕು ಎಂದು ಬಿಹಾರದ ಯುವ ನಾಯಕ ತೇಜಸ್ವಿ ಯಾದವ್‌ ಟ್ವೀಟ್‌ ಮಾಡಿದ್ದಾರೆ.

ಅಜಿತ್‌ ಅಂಜುಮ್‌ ಅವರು ಹಿಂದಿ ಪತ್ರಿಕೋದ್ಯಮದಲ್ಲಿ ಖ್ಯಾತ ಪತ್ರಕರ್ತರಾಗಿದ್ದು, ಬಿಜೆಪಿ ಹಾಗೂ ಸಂಘಪರಿವಾರದ  ಟೀಕಾಕಾರಾಗಿ ಗುರುತಿಸಿಕೊಂಡಿದ್ದರು. ಕೃಷಿ ಕಾನೂನು ವಿರೋಧಿ ಚಳವಳಿಯ ಸಂದರ್ಭದಲ್ಲಿ ಪ್ರತಿಭಟನಾನಿರತ ರೈತರನ್ನು ಖುದ್ದು ಭೇಟಿಯಾಗಿ, ರೈತರ ದನಿಗಳನ್ನು ತಮ್ಮ ಯೂಟ್ಯೂಬ್‌ ಚಾನೆಲ್‌ ಮುಖಾಂತರ ಲಕ್ಷಾಂತರ ಮಂದಿಗೆ ತಲುಪಿಸಿದ್ದರು. ಬಿಜೆಪಿ ಹಾಗೂ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿಗಳ ನಿಷ್ಠುರ ವಿಶ್ಲೇಷಣೆ ಮಾಡಿದ ಬಳಿಕ ಅಂಜುಮ್ ಪ್ರಮುಖ ಟಿವಿ ವಾಹಿನಿಯಲ್ಲಿ ಉದ್ಯೋಗ ಕಳೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News