ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈಗೆ ಪಂದ್ಯ ಗೆಲ್ಲಿಸಿಕೊಟ್ಟ ಧೋನಿಗೆ ರವೀಂದ್ರ ಜಡೇಜ ಅಭಿನಂದಿಸಿದ್ದು ಹೀಗೆ…

Update: 2022-04-22 06:45 GMT

ಮುಂಬೈ: ಪಂದ್ಯಗಳನ್ನು ಫಿನಿಶಿಂಗ್ ಮಾಡುವ ವಿಚಾರಕ್ಕೆ  ಬಂದಾಗ ತಾನು ಈಗಲೂ ಅತ್ಯುತ್ತಮವಾಗಿದ್ದೇನೆ  ಎಂದು ವಿಶ್ವ ಕ್ರಿಕೆಟ್‌ಗೆ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ನೆನಪಿಸಿದ್ದಾರೆ. 40ರ ವಯಸ್ಸಿನ ಧೋನಿ  ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕತ್ವವನ್ನು ತ್ಯಜಿಸಿದ ನಂತರ ಐಪಿಎಲ್ ನಲ್ಲಿ  ಇದು ಅವರ  ಕೊನೆಯ ಸೀಸನ್ ಆಗಬಹುದು  ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಆದರೆ ಮಾಜಿ ಭಾರತ ನಾಯಕ ಧೋನಿ ತನ್ನಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ ಎಂದು ತೋರಿಸಿಕೊಟ್ಟಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ಗುರುವಾರ ನಡೆದ ಐಪಿಎಲ್- 2022 ಪಂದ್ಯದಲ್ಲಿ, ಸಿಎಸ್ ಕೆ ಗೆಲುವಿಗೆ ಕೊನೆಯ ಓವರ್‌ನಲ್ಲಿ 17 ರನ್ ಅಗತ್ಯವಿತ್ತು. ಚೆನ್ನೈ ಕೊನೆಯ ಓವರ್ ನ  ಮೊದಲ ಎಸೆತದಲ್ಲಿ ಡ್ವೈನ್ ಪ್ರಿಟೋರಿಯಸ್  ವಿಕೆಟನ್ನು ಕಳೆದುಕೊಂಡಿತು. ಡ್ವೇನ್ ಬ್ರಾವೋ ತಾನೆದುರಿಸಿದ ಮೊದಲ ಎಸೆತದಲ್ಲಿ ಒಂದು ರನ್  ಗಳಿಸಿ ಧೋನಿಗೆ  ಸ್ಟ್ರೈಕ್‌  ನೀಡಿದರು. ಚೆನ್ನೈಗೆ ಅಂತಿಮ ನಾಲ್ಕು ಎಸೆತಗಳಲ್ಲಿ ಗೆಲುವಿಗೆ 16 ರನ್‌ಗಳ ಅಗತ್ಯವಿತ್ತು. ಈ ವೇಳೆ ಧೋನಿ ಅವರು ಒಂದು ಸಿಕ್ಸರ್ ಅನ್ನು ಸಿಡಿಸುವ ಮೂಲಕ ಮುಂಬೈ ಕೈಯಿಂದ ಗೆಲುವನ್ನು ಕಸಿಯುವ ಸೂಚನೆ ನೀಡಿದರು.  ಮುಂದಿನ ಎಸೆತದಲ್ಲಿ  ಒಂದು ಬೌಂಡರಿ, ನಂತರ ಎರಡು ರನ್ ಗಳಿಸಿದರು. ಚೆನ್ನೈ ಗೆಲುವಿಗೆ ಅಂತಿಮ ಎಸೆತದಲ್ಲಿ  4 ರನ್ ಅಗತ್ಯವಿದ್ದಾಗ  ಬೌಂಡರಿ ಸಿಡಿಸಿದ ಧೋನಿ ತಾನೊಬ್ಬ ಶ್ರೇಷ್ಠ ಫಿನಿಶರ್ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಧೋನಿ ಅವರು ಚೆನ್ನೈಯನ್ನು ಗೆಲುವಿನ ದಡ ಸೇರಿಸಿ ಮೈದಾನದಿಂದ ಹೊರನಡೆಯುತ್ತಿದ್ದಂತೆ  ನಾಯಕ ರವೀಂದ್ರ ಜಡೇಜ  ನೇತೃತ್ವದಲ್ಲಿ ಚೆನ್ನೈ ಸಹ ಆಟಗಾರರು ಭಾರತೀಯ ದಂತಕತೆಯನ್ನು ಅಭಿನಂದಿಸಲು ತೆರಳಿದರು. ಕೈ ಕುಲುಕುವ ಮೊದಲು ಜಡೇಜ ಧೋನಿಗೆ ತಲೆಬಾಗಿ ನಮಿಸಿದರು.

ಚೆನ್ನೈ ತಾನಾಡಿದ 7ನೇ ಪಂದ್ಯದಲ್ಲಿ 2ನೇ ಗೆಲುವು ದಾಖಲಿಸಿತು. ಮುಂಬೈ ಸತತ 7ನೇ ಪಂದ್ಯವನ್ನು ಸೋಲುವ ಮೂಲಕ ಸೋಲಿನ ಸರಪಳಿ ಮುಂದುವರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News