ಉಡುಪಿ | ಹೈಕೋರ್ಟ್ ಮೆಟ್ಟಿಲೇರಿದ್ದ ಹಿಜಾಬ್‌ಧಾರಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಣೆ

Update: 2022-04-22 08:57 GMT

ಉಡುಪಿ, ಎ.22: ಹಿಜಾಬ್ ಹಕ್ಕಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರ ಪೈಕಿ ಇಬ್ಬರು ದ್ವಿತೀಯ ಪಿಯು ಕಾಮರ್ಸ್ ವಿದ್ಯಾರ್ಥಿನಿಯರು ಶುಕ್ರವಾರ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಸಿಗದೆ ಪರೀಕ್ಷಾ ಕೇಂದ್ರದಿಂದ ಮನೆಗೆ ವಾಪಾಸ್ಸಾಗಿದ್ದಾರೆ.

ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಗಳಾದ ಆಲಿಯಾ ಅಸ್ಸಾದಿ ಹಾಗೂ ರೇಶಮ್, ಇಂದು ಬೆಳಗ್ಗೆ ತಮ್ಮ ಕಾಲೇಜಿಗೆ ತೆರಳಿ ಹಾಲ್ ಟಿಕೆಟ್ ಪಡೆದು, ಪರೀಕ್ಷಾ ಕೇಂದ್ರವಾಗಿರುವ ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿಗೆ ಪರೀಕ್ಷೆ ಬರೆಯಲು ತೆರಳಿದ್ದರು. ಪರೀಕ್ಷಾ ಕೇಂದ್ರದ ಪ್ರಾಂಶುಪಾಲರ ಕೊಠಡಿಯಲ್ಲಿ ಇವರಿಬ್ಬರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೆ ಸರಕಾರದ ಆದೇಶದಂತೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲದ ಕಾರಣ, ಪ್ರಾಂಶುಪಾಲರು ವಿದ್ಯಾರ್ಥಿಗಳ ಮನವೊಲಿಕೆಗೆ ಪ್ರಯತ್ನಿಸಿದರು.

ಈ ಹಿನ್ನೆಲೆಯಲ್ಲಿ 10:15ಕ್ಕೆ ಪರೀಕ್ಷಾ ಕೇಂದ್ರದಿಂದ ಹೊರ ನಡೆಯಲು ಮುಂದಾದ ವಿದ್ಯಾರ್ಥಿನಿಯರಿಗೆ ಮನ ಪರಿವರ್ತನೆಗಾಗಿ ಮತ್ತೆ 15 ನಿಮಿಷಗಳ ಅವಕಾಶ ಕಲ್ಪಿಸಲಾಯಿತು. ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ಒಪ್ಪದ ಇವರಿಬ್ಬರು ವಿದ್ಯಾರ್ಥಿನಿಯರು 10:45ರ ಸುಮಾರಿಗೆ ಪರೀಕ್ಷಾ ಕೇಂದ್ರದಿಂದ ಕಣ್ಣೀರು ಹಾಕಿಕೊಂಡು ಹೊರಬಂದು, ತಮ್ಮ ಮನೆಗೆ ತೆರಳಿದರು.

ಸ್ಥಳಕ್ಕೆ ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಆಗಮಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News