ವರ್ಷಾಂತ್ಯದೊಳಗೆ ಎಫ್‌ಟಿಎ ಕುರಿತು ಮಾತುಕತೆ ಮುಗಿಸಲು ಭಾರತ-ಬ್ರಿಟನ್ ಒತ್ತು

Update: 2022-04-22 15:03 GMT
Photo: PTI

ಹೊಸದಿಲ್ಲಿ,ಎ.22: ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆಗಳನ್ನು ಈ ವರ್ಷಾಂತ್ಯದೊಳಗೆ ಪೂರ್ಣಗೊಳಿಸಲು ಶುಕ್ರವಾರ ಇಲ್ಲಿ ಒತ್ತು ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಹೊಸ ಮತ್ತು ವಿಸ್ತರಿತ ದ್ವಿಪಕ್ಷೀಯ ರಕ್ಷಣಾ ಮತ್ತು ಭದ್ರತಾ ಸಹಭಾಗಿತ್ವಕ್ಕೆ ಒಪ್ಪಿಗೆ ನೀಡಿದರು. ಜಾನ್ಸನ್ ಅವರ ಭಾರತ ಭೇಟಿಯ ಎರಡನೇ ಮತ್ತು ಅಂತಿಮ ದಿನ ನಡೆದ ವ್ಯಾಪಕ ಮಾತುಕತೆಗಳಲ್ಲಿ ಒಟ್ಟಾರೆ ಸಂಬಂಧಗಳಿಗೆ ಹೊಸ ಆವೇಗವನ್ನು ನೀಡಲು ಉಭಯ ನಾಯಕರು ಪಣವನ್ನು ತೊಟ್ಟರು. ವಿವಿಧ ಕ್ಷೇತ್ರಗಳಲ್ಲಿ ಗಾಢ ಸಹಭಾಗಿತ್ವಗಳಿಗಾಗಿ ಮಹತ್ವಾಕಾಂಕ್ಷೆಯ ಗುರಿಗಳನ್ನು ಪಟ್ಟಿ ಮಾಡಿರುವ ಮಾರ್ಗಸೂಚಿ 2030ರ ಅನುಷ್ಠಾನದಲ್ಲಿ ಆಗಿರುವ ಪ್ರಗತಿಯನ್ನು ಉಭಯ ಪ್ರಧಾನಿಗಳು ಪುನರ್‌ಪರಿಶೀಲಿಸಿದರು.

ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ನಡೆದ ಮಾತುಕತೆಗಳಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಜಾನ್ಸನ್ ಉಪಸ್ಥಿತಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮೋದಿ,‘ಈ ವರ್ಷಾಂತ್ಯದೊಳಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ನಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡಲು ನಾವು ನಿರ್ಧರಿಸಿದ್ದೇವೆ ’ಎಂದು ತಿಳಿಸಿದರು.

ಎಲ್ಲ ದೇಶಗಳ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಗೌರವಿಸುವ ಅಗತ್ಯವನ್ನು ಪುನರುಚ್ಚರಿಸಿದ ಮೋದಿ,‘ಉಭಯ ದೇಶಗಳು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸ್ವತಂತ್ರ, ಮುಕ್ತ,ಅಂತರ್ಗತ ಮತ್ತು ನಿಯಮಗಳ ಆಧಾರಿತ ವ್ಯವಸ್ಥೆಗೆ ಒತ್ತು ನೀಡಿವೆ. ಶಾಂತಿಯುತ,ಸ್ಥಿರ ಮತ್ತು ಸುಭದ್ರ ಅಫ್ಘಾನಿಸ್ತಾನಕ್ಕೆ ನಮ್ಮ ಬೆಂಬಲವನ್ನು ನಾವು ಪುನರುಚ್ಚರಿಸಿದ್ದೇವೆ. ಇತರ ದೇಶಗಳಲ್ಲಿ ಭೀತಿವಾದವನ್ನು ಹರಡಲು ಅಫ್ಘಾನ್ ಪ್ರದೇಶವು ಬಳಕೆಯಾಗಬಾರದು’ ಎಂದರು.

ಉಕ್ರೇನ್ ಬಿಕ್ಕಟ್ಟು ಕುರಿತಂತೆ,ಸಮಸ್ಯೆಯನ್ನು ಬಗೆಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯ ಅಗತ್ಯವನ್ನು ಒತ್ತಿ ಹೇಳಿದ ಮೋದಿ ತಕ್ಷಣ ಕದನ ವಿರಾಮಕ್ಕೆ ಕರೆ ನೀಡಿದರು.

ಭಾರತ ಮತ್ತು ಬ್ರಿಟನ್ ನಡುವಿನ ಸಂಬಂಧಗಳನ್ನು ‘ನಮ್ಮ ಸಮಯದ ಅತ್ಯಂತ ಮಹತ್ವದ ಗೆಳೆತನದಲ್ಲೊಂದು’ಎಂದು ತನ್ನ ಹೇಳಿಕೆಯಲ್ಲಿ ಬಣ್ಣಿಸಿದ ಜಾನ್ಸನ್,‘ಹೊಸ ಮತ್ತು ವಿಸ್ತರಿತ ರಕ್ಷಣಾ ಮತ್ತು ಭದ್ರತಾ ಸಹಭಾಗಿತ್ವಕ್ಕೆ ನಾವು ಇಂದು ಒಪ್ಪಿಕೊಂಡಿದ್ದೇವೆ ’ಎಂದು ತಿಳಿಸಿದರು.

ಭೂಮಿ,ಸಮುದ್ರ,ವಾಯುಕ್ಷೇತ್ರ ಮತ್ತು ಸೈಬರ್ ಕ್ಷೇತ್ರಗಳಿಂದ ಹೊಸ ಬೆದರಿಕೆಗಳನ್ನು ಎದುರಿಸಲು ಒಂದಾಗಿ ಕಾರ್ಯ ನಿರ್ವಹಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ. ಹೊಸ ಯುದ್ಧವಿಮಾನ ತಂತ್ರಜ್ಞಾನಕ್ಕಾಗಿ ಮತ್ತು ಮಹಾಸಾಗರಗಳಿಂದ ಬೆದರಿಕೆಗಳನ್ನು ಪತ್ತೆಹಚ್ಚಲು ಮತ್ತು ಅವುಗಳಿಗೆ ಉತ್ತರಿಸಲು ಸಮುದ್ರ ಕ್ಷೇತ್ರದಲ್ಲಿ ಬ್ರಿಟನ್ ಭಾರತದ ಪಾಲುದಾರನಾಗಲಿದೆ ಎಂದರು. ಮೋದಿಯವರನ್ನು ತನ್ನ ‘ಖಾಸ್ ದೋಸ್ತ್’ಎಂದು ಜಾನ್ಸನ್ ಬಣ್ಣಿಸಿದರು.

ರಕ್ಷಣಾ ಖರೀದಿಗೆ ಪೂರೈಕೆ ಅವಧಿಯನ್ನು ಕಡಿಮೆಗೊಳಿಸಲು ಭಾರತಕ್ಕಾಗಿ ವಿಶೇಷ ಸಾರ್ವತ್ರಿಕ ರಫ್ತು ಪರವಾನಿಗೆ ವ್ಯವಸ್ಥೆಯೊಂದನ್ನು ಬ್ರಿಟನ್ ರೂಪಿಸುತ್ತಿದೆ ಎಂದು ಹೇಳಿದ ಜಾನ್ಸನ್,‘ಅಕ್ಟೋಬರ್‌ನಲ್ಲಿ ದೀಪಾವಳಿಯೊಳಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಪೂರ್ಣಗೊಳಿಸುವಂತೆ ನಮ್ಮ ಸಂಧಾನಕಾರರಿಗೆ ನಾವು ಹೇಳುತ್ತಿದ್ದೇವೆ ’ ಎಂದು ತಿಳಿಸಿದರು.

 ಶುದ್ಧ ಮತ್ತು ನವೀಕರಿಸಬಹುದಾದ ಶಕ್ತಿ ಕುರಿತು ನೂತನ ಸಹಕಾರದ ಬಗ್ಗೆಯೂ ಉಭಯ ಪ್ರಧಾನಿಗಳು ಚರ್ಚಿಸಿದರು.

ಗುರುವಾರ ಗುಜರಾತಿಗೆ ಭೇಟಿ ನೀಡಿದ್ದ ಜಾನ್ಸನ್ ಅಲ್ಲಿ ತನಗೆ ಸಿಕ್ಕಿದ ಭವ್ಯಸ್ವಾಗತವನ್ನು ಮೆಲುಕು ಹಾಕಿದರಲ್ಲದೆ,ತಾನು ಅಮಿತಾಬ್ ಬಚ್ಚನ್ ಮತ್ತು ಸಚಿನ್ ತೆಂಡೂಲ್ಕರ್ ಆಗಿರುವಂತೆ ಭಾವಿಸಿದ್ದೆ ಎಂದು ಹೇಳಿದರು.

ಕಳೆದ ವರ್ಷದ ಮೇ ತಿಂಗಳಿನಲ್ಲಿ ಮೋದಿ ಮತ್ತು ಜಾನ್ಸನ್ ನಡುವೆ ನಡೆದಿದ್ದ ಭಾರತ-ಬ್ರಿಟನ್ ವರ್ಚುವಲ್ ಶೃಂಗಸಭೆಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಗೆ ಉನ್ನತೀಕರಿಸಲಾಗಿತ್ತು.

ಶೃಂಗಸಭೆಯಲ್ಲಿ ಉಭಯ ದೇಶಗಳು ವ್ಯಾಪಾರ ಮತ್ತು ಆರ್ಥಿಕತೆ,ರಕ್ಷಣೆ ಮತ್ತು ಭದ್ರತೆ ,ಹವಾಮಾನ ಬದಲಾವಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ವಿಸ್ತರಿಸಲು 10 ವರ್ಷಗಳ ಮಾರ್ಗಸೂಚಿಯೊಂದನ್ನು ಅಳವಡಿಸಿಕೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News