ರೈಲಿನಲ್ಲಿ ಹಿಂದುತ್ವ ಪ್ರಚಾರದ ವೃತ್ತಪತ್ರಿಕೆಯ ವಿತರಣೆ: ತನಿಖೆ ಆರಂಭಿಸಿದ ಐಆರ್‌ಸಿಟಿಸಿ

Update: 2022-04-22 17:21 GMT
Photo: PTI

ಹೊಸದಿಲ್ಲಿ.ಎ.22: ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರಿಗೆ ಹಿಂದುತ್ವ ಪ್ರಚಾರದ ವೃತ್ತಪತ್ರಿಕೆಯ ವಿತರಣೆ ಕುರಿತು ಐಆರ್‌ಸಿಟಿಸಿ ಶುಕ್ರವಾರ ತನಿಖೆಯನ್ನು ಆರಂಭಿಸಿದೆ.

ರೈಲಿನ ‘ಪ್ರತಿ ಇನ್ನೊಂದು ಆಸನದಲ್ಲಿ ’ ದಿ ಆರ್ಯವರ್ತ ಎಕ್ಸ್‌ಪ್ರೆಸ್ ಪತ್ರಿಕೆಯ ಪ್ರತಿಗಳನ್ನು ಇಡಲಾಗಿದ್ದನ್ನು ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗೋಪಿಕಾ ಬಕ್ಷಿ ಅವರು ಟ್ವೀಟಿಸುವ ಮೂಲಕ ಗಮನ ಸೆಳೆದಿದ್ದರು.

‘ಇಸ್ಲಾಮಿಕ ಆಳ್ವಿಕೆಯಡಿ ನಡೆದಿದ್ದ ಹಿಂದುಗಳು,ಸಿಕ್ಖರು ಮತ್ತು ಬೌದ್ಧರ ನರಮೇಧವನ್ನು ಗುರುತಿಸಬೇಕಿದೆ’,‘ಸಿಐಎ ಏಜೆಂಟ್ ಮತ್ತು ಅಮೆರಿಕದ ಕಾಂಗ್ರೆಸ್ ಸದಸ್ಯೆ ಇಲ್ಹಾನ್ ಉಮರ್ ಪಿಒಕೆಗೆ ಭೇಟಿ’ ಮತ್ತು ‘ಅಮೆರಿಕವು ಔರಂಗಝೇಬ್‌ಗೆ ಹಿಟ್ಲರ್‌ನಂತೆ ಹತ್ಯಾಕಾಂಡದ ರೂವಾರಿ ಎಂದು ಹಣೆಪಟ್ಟಿಯನ್ನು ಹಚ್ಚಬೇಕು’ ಎಂಬಿತ್ಯಾದಿ ಶೀರ್ಷಿಕೆಗಳು ಪತ್ರಿಕೆಯಲ್ಲಿದ್ದವು. ಈ ಲೇಖನಗಳಲ್ಲಿ ಲೇಖಕರ ಹೆಸರುಗಳಿರಲಿಲ್ಲ.

ಈ ಪತ್ರಿಕೆಯ ಹೆಸರನ್ನು ಹಿಂದೆಂದೂ ಕೇಳಿರಲಿಲ್ಲ. ಐಆರ್‌ಸಿಟಿಸಿ ಇಂತಹ ಪತ್ರಿಕೆಯ ವಿತರಣೆಗೆ ಅನುಮತಿ ನೀಡಿದ್ದು ಹೇಗೆ ಎಂದು ಬಕ್ಷಿ ಪ್ರಶ್ನಿಸಿದ್ದಾರೆ.

ಪತ್ರಿಕೆಯ ವೆಬ್‌ಸೈಟ್ ಕೋವಿಡ್ ಕುರಿತು ಅಪಾಯಕಾರಿ ಮಾಹಿತಿಗಳನ್ನು ಹೊಂದಿತ್ತು ಎಂದು ಪತ್ರಕರ್ತೆ ರೋಹಿಣಿ ಮೋಹನ ನೆನಪಿಸಿಕೊಂಡರು.

ದಿ ಆರ್ಯವರ್ತ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ಪ್ರಕಟಗೊಳ್ಳುತ್ತಿರುವ ಇಂಗ್ಲಿಷ್ ದೈನಿಕ ಎಂದು ಅದರ ಟ್ವಿಟರ್ ಖಾತೆಯಲ್ಲಿ ಹೇಳಲಾಗಿದೆ.

ರೈಲಿನಲ್ಲಿ ವಿತರಣೆಗೆ ಅನುಮತಿ ಪಡೆದಿರುವ ಪತ್ರಿಕೆಗಳಲ್ಲಿ ಆರ್ಯವರ್ತ ಎಕ್ಸ್‌ಪ್ರೆಸ್ ಸೇರಿಲ್ಲ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಐಆರ್‌ಸಿಟಿಸಿ ವಕ್ತಾರ ಆನಂದ ಝಾ ತಿಳಿಸಿದರು.

ಇಂತಹ ವೃತ್ತಪತ್ರಿಕೆ ರೈಲಿನಲ್ಲಿ ವಿತರಣೆಯಾಗಿದ್ದು ಹೇಗೆ? ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಈ ಬಗ್ಗೆ ತನಿಖೆಯನ್ನು ನಡೆಸುವರೇ ಎಂದು ಕಾಂಗ್ರೆಸ್ ಸಂಸದ ಬಿ.ಮಾಣಿಕ್ಯಂ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News