ಮಲೇಶ್ಯಾದಲ್ಲಿ ರೊಹಿಂಗ್ಯಾಗಳ ಮೃತ್ಯು ಪ್ರಕರಣ: ವಿಶ್ವಸಂಸ್ಥೆ ಆಘಾತ

Update: 2022-04-22 17:34 GMT

ನ್ಯೂಯಾರ್ಕ್, ಎ.22: ಮಲೇಶ್ಯಾದಲ್ಲಿನ ನಿರಾಶ್ರಿತರ ತಾತ್ಕಾಲಿಕ ಬಂಧನ ಕೇಂದ್ರದಿಂದ ತಪ್ಪಿಸಿಕೊಂಡು ಓಡುವ ಹಂತದಲ್ಲಿ ಇಬ್ಬರು ಮಕ್ಕಳ ಸಹಿತ 6 ರೊಹಿಂಗ್ಯಾಗಳು ಅಪಘಾತದಿಂದ ಮೃತಪಟ್ಟಿರುವ ಪ್ರಕರಣದಿಂದ ತೀವ್ರ ಆಘಾತ ಮತ್ತು ದುಖವಾಗಿದೆ ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಏಜೆನ್ಸಿ ಯುಎನ್‌ಎಚ್‌ಸಿಆರ್ ಹೇಳಿದೆ.

   ಬುಧವಾರ ಬೆಳಿಗ್ಗೆ ಬಂಧನ ಕೇಂದ್ರದಲ್ಲಿ ಗಲಭೆ ಆರಂಭವಾದ ಬಳಿಕ 528 ರೊಹಿಂಗ್ಯಾ ಜನ ತಪ್ಪಿಸಿಕೊಂಡು ಪಲಾಯನ ಮಾಡಿದ್ದರು. ಇವರಲ್ಲಿ 6 ಮಂದಿ ಹೆದ್ದಾರಿಯಲ್ಲಿ ಓಡುತ್ತಿದ್ದಾಗ ವಾಹನಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು. ಬಂಧನ ಕೇಂದ್ರದಿಂದ ಪಲಾಯನ ಮಾಡಲು ಕಾರಣವೇನು ಎಂಬ ಬಗ್ಗೆಯೂ ಕಳವಳವಿದೆ. ಬಂಧನ ಕೇಂದ್ರದಲ್ಲಿ ನಡೆದ ಘಟನೆ ಅಥವಾ ಅದರಲ್ಲಿ ಪಾಲ್ಗೊಂಡ ವ್ಯಕ್ತಿಗಳ ಬಗ್ಗೆಯೂ ಮಾಹಿತಿಯಿಲ್ಲ. 2019ರಿಂದ ಮಲೇಶ್ಯಾದ ವಲಸಿಗರ ಬಂಧನ ಕೇಂದ್ರವನ್ನು ಪ್ರವೇಶಿಸಲು ಆಸ್ಪದ ನಿರಾಕರಿಸಲಾಗಿದೆ . ಇದರಿಂದ ಬಂಧನ ಕೇಂದ್ರದಲ್ಲಿ ನೆರವಿನ ಅಗತ್ಯವಿರುವವರನ್ನು ಸಂಪರ್ಕಿಸಲು ಮತ್ತು ಅವರ ಬಿಡುಗಡೆಗೆ ಮತ್ತು ಸುರಕ್ಷತೆ ಖಾತರಿಪಡಿಸಲು ತೊಡಕಾಗಿದೆ ಎಂದು ಎಂದು ಯುಎನ್‌ಎಚ್‌ಸಿಆರ್ ಗುರುವಾರ ಹೇಳಿದೆ.

  ಮಲೇಶ್ಯಾದ ಕೌಲಲಾಂಪುರದಲ್ಲಿ ಯುಎನ್‌ಎಚ್‌ಸಿಆರ್ ಕಚೇರಿಯಿದೆ. ಮ್ಯಾನ್ಮಾರ್‌ನಲ್ಲಿ ದೌರ್ಜನ್ಯಕ್ಕೆ ಒಳಗಾದ ಸಾವಿರಾರು ರೊಹಿಂಗ್ಯಾ ಜನತೆ ಅಲ್ಲಿಂದ ಪಲಾಯನ ಮಾಡಿ ಮಲೇಶ್ಯಾದಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ. ಮಕ್ಕಳು ಹಾಗೂ ವೃದ್ಧರನ್ನು ಬಂಧನ ಕೇಂದ್ರದಲ್ಲಿಡುವ ಬದಲು ಪರ್ಯಾಯ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಮಲೇಶ್ಯಾ ಸರಕಾರದೊಂದಿಗೆ ಕಾರ್ಯನಿರ್ವಹಿಸಲು ಸಿದ್ಧ. ಇತರರು ದೇಶ ಪ್ರವೇಶಿಸದಂತೆ ತಡೆಯುವ ಮೂಲಕ ವ್ಯಕ್ತಿಗಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಅಕ್ರಮ, ಅಮಾನವೀಯ ಮತ್ತು ನಿಷ್ಪರಿಣಾಮಕಾರಿಯಾಗಿದೆ. ಆಶ್ರಯ ಕೋರುವುದು ಕಾನೂನುಬಾಹಿರ ಕೃತ್ಯವಲ್ಲ. ಯಾವುದೇ ಪ್ರಕರಣದಲ್ಲೂ ಬಂಧನ ಎಂಬುದು ಅಂತಿಮ ಆಯ್ಕೆಯಾಗಬೇಕಿದೆ ಮತ್ತು ಇದಕ್ಕೆ ಕಾನೂನಿನ ಮಾನ್ಯತೆ ಅಗತ್ಯವಾಗಿದೆ. ನ್ಯಾಯಸಮ್ಮತ ಉದ್ದೇಶ ಮತ್ತು ಅಗತ್ಯವೆಂದು ಕಂಡುಬಂದರೆ ಮಾತ್ರ ಬಂಧನ ಕ್ರಮಕ್ಕೆ ಮುಂದಾಗಬೇಕು ಎಂದು ಯುಎನ್‌ಎಚ್‌ಸಿಆರ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News