ಅಫ್ಘಾನ್: ಮಸೀದಿ ಮೇಲಿನ ದಾಳಿ ಪ್ರಕರಣ; ಪ್ರಧಾನ ಸೂತ್ರಧಾರನ ಬಂಧನ

Update: 2022-04-22 17:38 GMT

ಕಾಬೂಲ್, ಎ.22: ಅಫ್ಗಾನ್‌ನ ಮಸೀದಿಯ ಮೇಲಿನ ಬಾಂಬ್ ದಾಳಿ ಪ್ರಕರಣದ ಪ್ರಮುಖ ಸೂತ್ರಧಾರ ಎಂದು ಶಂಕಿಸಲಾಗಿರುವ ದಾಯಶ್ ಸಂಘಟನೆಯ ಕಾರ್ಯಕರ್ತನನ್ನು ಬಂಧಿಸಿರುವುದಾಗಿ ಪೊಲೀಸರು ಶುಕ್ರವಾರ ಹೇಳಿದ್ದಾರೆ.

 ಉತ್ತರದ ಮಝರ್-ಎ-ಶರೀಫ್ ನಗರದ ಮಸೀದಿಯಲ್ಲಿ ಗುರುವಾರ ಸಂಭವಿಸಿದ ಬಾಂಬ್ ಸ್ಫೋಟದ ಹೊಣೆಯನ್ನು ದಾಯಶ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಬಾಂಬ್ ಸ್ಫೋಟದಿಂದ ಮಸೀದಿಯಲ್ಲಿದ್ದ ಕನಿಷ್ಟ 12 ಮಂದಿ ಮೃತಪಟ್ಟಿದ್ದರು ಮತ್ತು 58 ಮಂದಿ ಗಾಯಗೊಂಡಿದ್ದರು. ಬಂಧಿತ ಆರೋಪಿ ಸಂಘಟನೆಯ ಪ್ರಮುಖ ಮುಖಂಡ ಅಬ್ದುಲ್ ಹಮೀದ್ ಸಂಗರ್ಯಾರ್. ಈತ ಮಸೀದಿಯ ಮೇಲಿನ ದಾಳಿ ಪ್ರಕರಣದ ಪ್ರಮುಖ ಸಂಚುಗೋರ. ಈ ಹಿಂದೆಯೂ ಅಫ್ಗಾನ್‌ನಲ್ಲಿ ನಡೆದ ಹಲವು ದಾಳಿಗಳಲ್ಲಿ ಈತ ಪ್ರಮುಖ ಪಾತ್ರ ನಿರ್ವಹಿಸಿದ್ದ. ಆದರೆ ದಾಳಿ ನಡೆಸಿದ ಬಳಿಕ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದ . ಆದರೆ ಈ ಬಾರಿ ಖಚಿತ ಮಾಹಿತಿಯ ಬಳಿಕ ವಿಶೇಷ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ ಎಂದು ಬಾಖ್ ಪ್ರಾಂತದ ಪೊಲೀಸ್ ವಕ್ತಾರ ಆಸಿಫ್ ವಝೀರಿ ಹೇಳಿದ್ದಾರೆ.

ಗುರುವಾರ ಉತ್ತರದ ಕುಂಡುರ್ ನಗರದಲ್ಲಿ ನಡೆದ ಮತ್ತೊಂದು ಬಾಂಬ್ ಸ್ಫೋಟವನ್ನು ತಾನೇ ನಡೆಸಿರುವುದಾಗಿ ದಾಯೆಷ್ ಹೇಳಿದೆ. ಈ ಸ್ಫೋಟದಲ್ಲಿ 4 ಮಂದಿ ಮೃತಪಟ್ಟು 18 ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News