×
Ad

ಇಸ್ರೇಲ್ ಪೊಲೀಸರು-ಪೆಲೆಸ್ತೀನಿಯರ ಘರ್ಷಣೆ: 31 ಮಂದಿಗೆ ಗಾಯ

Update: 2022-04-22 23:16 IST

 ಜೆರುಸಲೇಂ, ಎ.22: ಜೆರುಸಲೇಂನ ಅಲ್‌ಅಖ್ಸಾ ಮಸೀದಿಯ ಆವರಣದಲ್ಲಿ ಶುಕ್ರವಾರ ಇಸ್ರೇಲ್ ಪೊಲೀಸರು ಮತ್ತು ಪೆಲೆಸ್ತೀನೀಯರ ಮಧ್ಯೆ ನಡೆದ ಘರ್ಷಣೆಯಲ್ಲಿ ಕನಿಷ್ಟ 31 ಪೆಲೆಸ್ತೀನೀಯರು ಗಾಯಗೊಂಡಿರುವುದಾಗಿ ಮಾಧ್ಯಮಗಳ ು ವರದಿ ಮಾಡಿದೆ.

14 ಪೆಲೆಸ್ತೀನೀಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೆಲೆಸ್ತೀನ್ ರೆಡ್‌ಕ್ರೆಸೆಂಟ್ ಆಂಬ್ಯುಲೆನ್ಸ್ ಸರ್ವಿಸ್ ಹೇಳಿದೆ. ಬೆಳಗ್ಗಿನ ಪ್ರಾರ್ಥನೆಯ ಬಳಿಕ ಪೊಲೀಸರು ಮಸೀದಿಯ ಆವರಣದೊಳಗೆ ಪ್ರವೇಶಿಸಿ, ಅಲ್ಲಿದ್ದ ಸುಮಾರು 200 ಪೆಲೆಸ್ತೀನಿಯರನ್ನು ಚದುರಿಸಲು ಸ್ಟನ್ ಗ್ರೆನೇಡ್ (ಭಾರೀ ಸದ್ದು ಮತ್ತು ಬೆಳಕಿನೊಂದಿಗೆ ಸ್ಫೋಟಿಸುವ ಗ್ರೆನೇಡ್) ಮತ್ತು ರಬ್ಬರ್ ಬುಲೆಟ್ ಪ್ರಯೋಗಿಸಿದರು. ಆಗ ಕೆಲವರು ಪೊಲೀಸರತ್ತ ಕಲ್ಲು ಮತ್ತು ಇಟ್ಟಿಗೆ ಎಸೆದರು. ಈ ಘಟನೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತರ ಮೇಲೆಯೂ ಅತ್ಯಂತ ಸನಿಹದಿಂದ ಪೊಲೀಸರು ರಬ್ಬರ್ ಬುಲೆಟ್ ಹಾರಿಸಿದರು ಎಂದು ರಾಯ್ಟರ್ಸ್ ವರದಿ ಮಾಡಿದೆ.

  ಆದರೆ ಮಸೀದಿಯ ಒಳಗಿದ್ದವರು ಕಲ್ಲು ಮತ್ತು ಇಟ್ಟಿಗೆಯಿಂದ ದಾಳಿ ನಡೆಸಿದಾಗ ಅವರನ್ನು ಚದುರಿಸಲು ರಬ್ಬರ್ ಬುಲೆಟ್ ಬಳಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಲ್‌ಅಖ್ಸಾ ಮಸೀದಿ ಇರುವ ಈ ಕಟ್ಟಡದ ಆವರಣವನ್ನು ಯೆಹೂದಿಗಳು ಟೆಂಪಲ್ ಮೌಂಟ್ ಎಂದು ಕರೆಯುತ್ತಿದ್ದಾರೆ. ಇಲ್ಲಿ ಪ್ರಾರ್ಥನೆ ಸಲ್ಲಿಸುವ ವಿಷಯದಲ್ಲಿ ಯೆಹೂದಿಗಳು ಹಾಗೂ ಪೆಲೆಸ್ತೀನೀಯರ ಮಧ್ಯೆ ಆಗಾಗ ವಿವಾದ ಮತ್ತು ಸಂಘರ್ಷ ನಡೆಯುತ್ತಿರುತ್ತದೆ. ಈ ವರ್ಷ ಮುಸ್ಲಿಮರ ಪವಿತ್ರ ತಿಂಗಳು ರಮಝಾನ್ ಮತ್ತು ಯೆಹೂದಿಗಳ ಹಬ್ಬ ಪಾಸ್‌ಓವರ್ ಏಕಕಾಲದಲ್ಲಿ ಬಂದಿರುವುದರಿಂದ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ.

   ಪೂರ್ವ ಜೆರುಸಲೇಂನ ಓಲ್ಡ್‌ಸಿಟಿ ಪ್ರಸ್ಥಭೂಮಿಯ ಗುಡ್ಡದಲ್ಲಿರುವ ಅಲ್‌ಅಖ್ಸಾ ಆವರಣವನ್ನು 1967ರ ಯುದ್ಧದಲ್ಲಿ ಇಸ್ರೇಲ್ ವಶಪಡಿಸಿಕೊಂಡು ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿದೆ. ಆದರೆ ಇದನ್ನು ಅಂತರಾಷ್ಟ್ರೀಯ ಸಮುದಾಯ ಮಾನ್ಯ ಮಾಡಿಲ್ಲ. ಆಕ್ರಮಿತ ಪಶ್ಚಿಮ ದಂಡೆ ಮತ್ತು ಗಾಝಾ ಪಟ್ಟಿಯಲ್ಲಿ ತಾವು ಸ್ಥಾಪಿಸಲಿರುವ ರಾಷ್ಟ್ರಕ್ಕೆ ಪೂರ್ವ ಜೆರಸುಲೇಂ ರಾಜಧಾನಿಯಾಗಬೇಕೆಂದು ಪೆಲೆಸ್ತೀನೀಯರು ಆಗ್ರಹಿಸುತ್ತಿದ್ದಾರೆ.

ಮಾರ್ಚ್‌ನಿಂದ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಕನಿಷ್ಟ 29 ಪೆಲೆಸ್ತೀನಿಯರು ಮೃತಪಟ್ಟಿರುವುದಾಗಿ ಪೆಲೆಸ್ತೀನ್‌ನ ಆರೋಗ್ಯ ಇಲಾಖೆ ಹೇಳಿದೆ. ಇಸ್ರೇಲ್‌ನಲ್ಲಿ ಪೆಲೆಸ್ತೀನಿಯರು ನಡೆಸಿದ ದಾಳಿಯಲ್ಲಿ 14 ಮಂದಿ ಮೃತಪಟ್ಟಿರುವುದಾಗಿ ಇಸ್ರೇಲ್ ಪೊಲೀಸರ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News