ಎರಡು ವರ್ಷಗಳ ಬಳಿಕ ಮತ್ತೆ ಭಾರತೀಯ ಮುಸ್ಲಿಮರಿಗೆ ಮುಂದಿನ ತಿಂಗಳು ಹಜ್ ಯಾತ್ರೆ ಆರಂಭ
ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ಎರಡು ವರ್ಷಗಳ ಸುಧೀರ್ಘ ಅಂತರದ ಬಳಿಕ ಭಾರತೀಯ ಮುಸ್ಲಿಮರಿಗೆ ಪವಿತ್ರ ಹಜ್ ಯಾತ್ರೆಯ ಅವಕಾಶ ಮತ್ತೆ ಲಭ್ಯವಾಗಿದೆ.
ಸೌದಿ ಅರೇಬಿಯಾ ಈ ಬಾರಿ ಅಂತರರಾಷ್ಟ್ರೀಯ ಯಾತ್ರಾರ್ಥಿಗಳ ಪ್ರವೇಶವನ್ನು ಮುಕ್ತವಾಗಿಸಿದೆ. ಆದಾಗ್ಯೂ ಸಾಂಕ್ರಾಮಿಕ ಇನ್ನೂ ಕೆಲವೆಡೆ ಉಳಿದುಕೊಂಡಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಶಿಷ್ಟಾಚಾರಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಭಾರತದಿಂದ ಈ ವರ್ಷ 79,237 ಯಾತ್ರಾರ್ಥಿಗಳನ್ನು ಕಳುಹಿಸಲು ಅವಕಾಶವಿದೆ.
ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾದ ಶುಕ್ರವಾರದವರೆಗೆ ಸುಮಾರು 88 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಪುರಷರ ನೆರವು ಇಲ್ಲದೇ ಸ್ವತಂತ್ರ್ಯವಾಗಿ ಯಾತ್ರೆ ಕೈಗೊಳ್ಳಲು ಉದ್ದೇಶಿಸಿ 2000 ಮಹಿಳಾ ಯಾತ್ರಾರ್ಥಿಗಳು ಸೇರಿದ್ದಾರೆ. 2018ರ ಹೊಸ ಹಜ್ ನೀತಿ ಅನ್ವಯ 45 ವರ್ಷ ಮೇಲ್ಪಟ್ಟ ಮಹಿಳಾ ಯಾತ್ರಿಗಳಿಗೆ ಮಾತ್ರ ಜತೆಗೆ ಪುರುಷರು ಇಲ್ಲದೇ ಪ್ರಯಾಣಿಸಲು ಅವಕಾಶವಿದೆ. ಆದರೆ ಕನಿಷ್ಠ ನಾಲ್ಕು ಮಂದಿ ಮಹಿಳೆಯರು ಗುಂಪಿನಲ್ಲಿ ಇರಬೇಕಾಗುತ್ತದೆ.
2019ರಲ್ಲಿ ಹಜ್ ಯಾತ್ರೆ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಸ್ಥಗಿತಗೊಳ್ಳುವ ಮುನ್ನ 2 ಲಕ್ಷ ಮಂದಿ ಭಾರತೀಯ ಮುಸ್ಲಿಮರು ಯಾತ್ರೆಗೆ ತೆರಳಿದ್ದರು. ಈ ಪೈಕಿ ಅರ್ಧದಷ್ಟು ಮಹಿಳೆಯರು. ಮಹಿಳೆಯರ ಪೈಕಿ 3040 ಮಹಿಳಾ ಯಾತ್ರಿಗಳು ಪುರಷರ ನೆರವು ಇಲ್ಲದೇ ಪ್ರಯಾಣಿಸಿದ್ದರು.
ಮೊದಲ ಹಜ್ ಯಾತ್ರಿಗಳ ಗುಂಪು ಮೇ 31ರಂದು ಪ್ರಯಾಣ ಆರಂಭಿಸಲಿದೆ. ಭಾರತ ಹಾಗೂ ಸೌದಿ ಅರೇಬಿಯಾ ಸರ್ಕಾರ ನಿಗದಿಪಡಿಸಿರುವ ಎಲ್ಲ ಕೋವಿಡ್-19 ಶಿಷ್ಟಾಚಾರಗಳನ್ನು ಪ್ರಯಾಣ ಹಾಗೂ ವಾಸ್ತವ್ಯದ ವೇಳೆ ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.