"ಉಕ್ರೇನ್ ಸಂಘರ್ಷ, ದಿಲ್ಲಿ ಹಿಂಸಾಚಾರ ಕುರಿತು 'ಪ್ರಚೋದನಾತ್ಮಕ' ಕಾರ್ಯಕ್ರಮ ಪ್ರಸಾರ ಬೇಡ"

Update: 2022-04-23 11:33 GMT
File Photo: PTI

ಹೊಸದಿಲ್ಲಿ: ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಮತ್ತು ಉಕ್ರೇನ್-ರಷ್ಯಾ ಸಂಘರ್ಷ ಕುರಿತಂತೆ "ಸೆನ್ಸೇಶನಲ್'' ಮತ್ತು ಪ್ರಚೋದನಾತ್ಮಕ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡದೇ ಇರುವಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಖಾಸಗಿ ಟಿವಿ ವಾಹಿನಿಗಳಿಗೆ ಸಲಹೆ ನೀಡಿದೆ.

"ಇತ್ತೀಚಿಗಿನ ದಿನಗಳಲ್ಲಿ ಹಲವು ಟಿವಿ ವಾಹಿನಿಗಳು ಸುದ್ದಿಗಳನ್ನು ಪ್ರಸಾರ ಮಾಡುವ ರೀತಿ ತಪ್ಪು ದಾರಿಗೆಳೆಯುವಂತಿದೆ ಹಾಗೂ ಸಾಮಾಜಿಕವಾಗಿ ಅಸ್ವೀಕಾರಾರ್ಹ ರೀತಿಯ ನಿಂದನಾತ್ಮಕ ಭಾಷೆಯನ್ನು ಬಳಸಿ ಈ ಕುರಿತಾದ ನಿಬಂಧನೆಗಳನ್ನು ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದೆ. ರಷ್ಯಾ-ಉಕ್ರೇನ್ ಸಂಘರ್ಷ, ವಾಯುವ್ಯ ದಿಲ್ಲಿಯಲ್ಲಿನ ಕೆಲ ಘಟನೆಗಳು ಹಾಗೂ ಕೆಲ ಚರ್ಚಾ ಕಾರ್ಯಕ್ರಮಗಳಲ್ಲಿ ಎಚ್ಚರಿಕೆ ವಹಿಸಬೇಕು,'' ಎಂದು ಸಚಿವಾಲಯ ಇಂದು ಬಿಡುಗಡೆಗೊಳಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.

"ಒಂದು ವಾಹಿನಿಯು ಎಪ್ರಿಲ್ 18, 2022ರಂದು "ಉಕ್ರೇನ್ ಮೆ ಅಟೋಮಿ ಹಡ್ಕಾಂಪ್" ಎಂಬ ಶೀರ್ಷಿಕೆಯ ಸುದ್ದಿ ಪ್ರಕಟಿಸಿ ಉಕ್ರೇನ್ ಮೇಲೆ ರಷ್ಯ ಅಣ್ವಸ್ತ್ರ ದಾಳಿ ಯೋಜಿಸುತ್ತಿದೆ ಎಂದು ಬರೆದಿದೆ. ಹಾಗೂ ದಾಳಿ  ಕೆಲವೇ ದಿನಗಳಲ್ಲಿ ನಡೆಯಲಿದೆ ಎಂದು ಬರೆದಿದೆ. ಅಂತರಾಷ್ಟ್ರೀಯ ಏಜನ್ಸಿಗಳನ್ನೂ ಅದು ತಪ್ಪಾಗಿ ಉಲ್ಲೇಖಿಸಿದೆ,'' ಎಂದು ಸುತ್ತೋಲೆ ತಿಳಿಸಿದೆ.

ದಿಲ್ಲಿ ಹಿಂಸಾಚಾರ ಕುರಿತಂತೆ ವಾಹಿನಿಯೊಂದು 'ದಿಲ್ಲಿ ಮೇ ಅಮನ್ ಕಾ ದುಷ್ಮನ್ ಕೌನ್' ಎಂಬ ಶೀರ್ಷಿಕೆಯ ಸುದ್ದಿಯೊಂದಿಗೆ ವ್ಯಕ್ತಿಯೊಬ್ಬ ಕೈಯಲ್ಲಿ ತಲವಾರು ಹಿಡಿದಿರುವ ವೀಡಿಯೋ ಪ್ರದರ್ಶಿಸಿ ಇದು ಧಾರ್ಮಿಕ ಮೆರವಣಿಗೆ ವೇಳೆ ಪೂರ್ವನಿಯೋಜಿತ ಹಿಂಸೆ, ಎಂದು ಹೇಳಿದೆ,'' ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಈ ರೀತಿ ಹಲವಾರು 'ಆಕ್ಷೇಪಾರ್ಹ' ಕಾರ್ಯಕ್ರಮಗಳ ಪ್ರಸಾರವನ್ನು ಉಲ್ಲೇಖಿಸಿದ ಸಚಿವಾಲಯ ಈ ರೀತಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News