ಮಹಾರಾಷ್ಟ್ರ ಸಿಎಂ ನಿವಾಸದ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ್ದ ರಾಣಾ ದಂಪತಿಯ ಬಂಧನ
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಪಠಿಸುವ ಯೋಜನೆಯನ್ನು ಅಮರಾವತಿ ಸಂಸದೆ ನವನೀತ್ ರಾಣಾ ಮತ್ತು ಆಕೆಯ ಪತಿ ಶಾಸಕ ರವಿ ರಾಣಾ ಅವರು ರದ್ದುಗೊಳಿಸಿದ ಬೆನ್ನಲ್ಲೇ, ಮುಂಬೈ ಪೊಲೀಸರು ದಂಪತಿಯನ್ನು ಉಪನಗರ ಖಾರ್‌ನಲ್ಲಿರುವ ಅವರ ಮನೆಯಿಂದ ಬಂಧಿಸಿದ್ದಾರೆ ಎಂದು ndtv ವರದಿ ಮಾಡಿದೆ.
ಪೊಲೀಸರು ರಾಣಾ ದಂಪತಿಯ ವಿರುದ್ಧ ಐಪಿಸಿ ಸೆಕ್ಷನ್ 153 (ಎ) (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಇತ್ಯಾದಿ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
“ಪ್ರಧಾನಿ ಮೋದಿ ನಾಳೆ ಮುಂಬೈಗೆ ಭೇಟಿ ನೀಡುತ್ತಿರುವಾಗ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಪರಿಸ್ಥಿತಿ ಉದ್ಭವಿಸಬಾರದು ಎಂದು ಸಿಎಂ ನಿವಾಸದ ಮುಂದೆ ಹನುಮಾನ್ ಚಾಲಿಸಾ ಪಠಿಸುವ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದೆ ಎಂದು ದಂಪತಿಗಳು ಹೇಳಿದ್ದರು. ಆದರೆ, ಶಿವಸೇನೆ ಕಾರ್ಯಕರ್ತರು ದಂಪತಿ ನಿವಾಸದ ಹೊರಗೆ ಮುತ್ತಿಗೆ ಹಾಕಿ ದಿಗ್ಬಂಧನ ವಿಧಿಸಿದ್ದ ಹಿನ್ನೆಲೆಯಲ್ಲಿ ದಂಪತಿ ಹನುಮಾನ್ ಚಾಲಿಸಾ ಪಠಿಸುವ ನಿರ್ಧಾರವನ್ನು ಕೈಬಿಟ್ಟಿದ್ದರು ಎಂದು ಹೇಳಲಾಗಿದೆ.
ಶನಿವಾರ ಬೆಳಗ್ಗೆ ಮುಂಬೈನ ರಾಣಾ ದಂಪತಿಯ ಅಪಾರ್ಟ್‌ಮೆಂಟ್‌ನ ಹೊರಗೆ ಸೇನಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು, ಹಾಗೂ ದಂಪತಿ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಹನುಮಾನ್ ಚಾಲಿಸಾ ಪಠಿಸುವ ತಮ್ಮ ನಿರ್ಧಾರವನ್ನು ರಾಣಾ ದಂಪತಿ ಕೈಬಿಟ್ಟಾಗ ಶಿವಸೇನೆ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ದರು ಎಂದು ವರದಿಯಾಗಿದೆ.