ಶ್ರೀಲಂಕಾ: ಪ್ರಧಾನಿ ಪದತ್ಯಾಗಕ್ಕೆ ಸಂಪುಟ ಸದಸ್ಯರ ಒತ್ತಡ

Update: 2022-04-23 16:02 GMT
Photo: PTI

ಕೊಲಂಬೊ, ಎ.23: ಅಸಾಮಾನ್ಯ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಪ್ರಧಾನಿಯ ಪದತ್ಯಾಗಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ ಈಗ ಸಂಪುಟದ ಕೆಲವು ಸಚಿವರು ಹಾಗೂ ಪಕ್ಷದ ಹಿರಿಯ ಮುಖಂಡರೂ ಧ್ವನಿಗೂಡಿಸಿದ್ದಾರೆ ಎಂದು ವರದಿಯಾಗಿದೆ.

    ಶ್ರೀಲಂಕಾದಲ್ಲಿ ಅರ್ಥವ್ಯವಸ್ಥೆ ಪತನದ ಅಂಚಿಗೆ ಸಾಗಲು ಅಧ್ಯಕ್ಷ ಗೊತಬಯ ರಾಜಪಕ್ಸ ಅವರ ಸರಕಾರದ ಅದಕ್ಷತೆಯೇ ಕಾರಣ. ಆದ್ದರಿಂದ ರಾಜಪಕ್ಸ ಮತ್ತು ಅವರ ಕುಟುಂಬದ ಸದಸ್ಯರೇ ಹೆಚ್ಚಿರುವ ಸರಕಾರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದೇಶದಾದ್ಯಂತ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಶನಿವಾರ ಕೊಲಂಬೊದಲ್ಲಿ ಅಧ್ಯಕ್ಷರ ಕಚೇರಿಯೆದುರು ಪ್ರತಿಭಟನೆ ನಡೆಸುತ್ತಿದ್ದ ಜನರನ್ನುದ್ದೇಶಿಸಿ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಸಚಿವ ನಲಾಕ ಗೊದಹೆವ, ಪ್ರತಿಭಟನೆಗೆ ತಮ್ಮ ಬೆಂಬಲವಿದೆ. ಪ್ರಧಾನಿ ಹುದ್ದೆಯಲ್ಲಿರುವ ತಮ್ಮ ಹಿರಿಯ ಸಹೋದರ ಮಹೀಂದ್ರ ರಾಜಪಕ್ಸರನ್ನು ಅಧ್ಯಕ್ಷರು ತಕ್ಷಣ ವಜಾಗೊಳಿಸಿ ಸರ್ವಪಕ್ಷಗಳ ಮಧ್ಯಂತರ ಸರಕಾರ ರಚಿಸಬೇಕು ಎಂದು ಆಗ್ರಹಿಸಿದರು.

 ಮಂಗಳವಾರ ಪೊಲೀಸರ ಗೋಲೀಬಾರಿನಲ್ಲಿ ಓರ್ವ ಪ್ರತಿಭಟನಾಕಾರ ಮೃತಪಟ್ಟ ಬಳಿಕ ಸರಕಾರ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ತಾನು ಈ ಹಿಂದೆಯೇ ರಾಜೀನಾಮೆಯ ಪ್ರಸ್ತಾಪ ಮಾಡಿದ್ದೆ, ಆದರೆ ಅಧ್ಯಕ್ಷರು ಅದನ್ನು ಸ್ವೀಕರಿಸಿಲ್ಲ. ದೇಶಕ್ಕೆ ಎದುರಾಗಿರುವ ಆರ್ಥಿಕ ಬಿಕ್ಕಟ್ಟನ್ನು ನಿರ್ವಹಿಸಲು ರಾಜಕೀಯ ಸ್ಥಿರತೆ ಮರುಸ್ಥಾಪಿಸುವ ಅಗತ್ಯವಿದೆ. ಪ್ರಧಾನಿ ಸಹಿತ ಸಂಪೂರ್ಣ ಸಚಿವ ಸಂಪುಟ ರಾಜೀನಾಮೆ ನೀಡಬೇಕು ಮತ್ತು ಎಲ್ಲರ ವಿಶ್ವಾಸಕ್ಕೆ ಪಾತ್ರವಾಗುವ ಸರ್ವಪಕ್ಷಗಳನ್ನು ಒಳಗೊಂಡ ಮಧ್ಯಂತರ ಸರಕಾರ ರಚನೆಯಾಗಬೇಕು ಎಂದವರು ಹೇಳಿದ್ದಾರೆ.

  ಪ್ರಧಾನಿ ಪದತ್ಯಾಗ ಮಾಡಬೇಕೆಂಬ ಆಗ್ರಹಕ್ಕೆ ಮಾಜಿ ಸಚಿವ ಹಾಗೂ ಸಚಿವ ಸಂಪುಟದ ವಕ್ತಾರನಾಗಿದ್ದ ದಲ್ಲಾಸ್ ಅಲಹಪ್ಪೆರುಮ ಸಹಿತ ಆಡಳಿತ ಪಕ್ಷದ ಹಲವು ಹಿರಿಯ ಸದಸ್ಯರು ತಮ್ಮ ಬೆಂಬಲ ಸೂಚಿಸಿದ್ದಾರೆ. ಗರಿಷ್ಟ ಒಂದು ವರ್ಷದ ಅವಧಿಗೆ, ಸಂಸತ್ತನ್ನು ಪ್ರತಿನಿಧಿಸುವ ಎಲ್ಲಾ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ಕಿರು ಸಚಿವ ಸಂಪುಟವನ್ನು ರಚಿಸುವಂತೆ ಅಧ್ಯಕ್ಷರನ್ನು ಆಗ್ರಹಿಸುವುದಾಗಿ ಅಲಹಪ್ಪೆರುಮ ಹೇಳಿದ್ದಾರೆ.

  ಕಳೆದ ಕೆಲ ತಿಂಗಳಿನಲ್ಲಿ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿರುವ ಶ್ರೀಲಂಕಾದಲ್ಲಿ ವಿದೇಶಿ ವಿನಿಮಯ ದಾಸ್ತಾನು ಅತ್ಯಂತ ಕನಿಷ್ಟ ಮಟ್ಟಕ್ಕೆ ಇಳಿದಿದೆ. ಆಮದು ಮಾಡಿಕೊಳ್ಳಲು ವಿದೇಶಿ ವಿನಿಮಯದ ಕೊರತೆಯಿರುವುದರಿಂದ ಔಷಧ, ಹಾಲಿನ ಪುಡಿ, ಅಡುಗೆ ಅನಿಲ, ಸೀಮೆಎಣ್ಣೆ ಹಾಗೂ ಇತರ ದೈನಂದಿನ ಅಗತ್ಯದ ವಸ್ತುಗಳ ಕೊರತೆಯಿದೆ. ತೈಲ ಹಾಗೂ ವಿದ್ಯುತ್‌ನ ಪೂರೈಕೆಯೂ ಅಸ್ತವ್ಯಸ್ತವಾಗಿದೆ. ಸುಮಾರು 3.88 ಲಕ್ಷ ಕೋಟಿ ರೂ.ನಷ್ಟು ವಿದೇಶಿ ಸಾಲ ಮರುಪಾವತಿಗೆ ಬಾಕಿಇರುವುದರಿಂದ ಆರ್ಥಿಕ ನೆರವನ್ನು ವಿಸ್ತರಿಸುವಂತೆ ಕೋರಿ ಶ್ರೀಲಂಕಾವು ಐಎಂಎಫ್ ಕದ ತಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News