ಶರತ್ಕಾಲ ಅಂತ್ಯದೊಳಗೆ ಸರ್ಮಾತ್ ಕ್ಷಿಪಣಿ ಸೇನೆಗೆ ನಿಯೋಜನೆ: ರಶ್ಯ

Update: 2022-04-23 18:18 GMT

ಮಾಸ್ಕೊ, ಎ.23: ಇತ್ತೀಚೆಗಷ್ಟೇ ಯಶಸ್ವಿಯಾಗಿ ಪರೀಕ್ಷೆ ನಡೆಸಿದ, ಅಮೆರಿಕದ ವಿರುದ್ಧ ಪರಮಾಣು ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಸರ್ಮಾತ್ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಯನ್ನು ಈ ಶರತ್ಕಾಲದ ಅಂತ್ಯದೊಳಗೆ ಸಶಸ್ತ್ರ ಪಡೆಯಲ್ಲಿ ನಿಯೋಜಿಸಲಾಗುವುದು ಎಂದು ರಶ್ಯ ಶನಿವಾರ ಹೇಳಿದೆ.

    ಬುಧವಾರ ಪ್ರಥಮ ಪರೀಕ್ಷೆಯಲ್ಲಿ ಯಶಸ್ವಿಯಾದ ಸರ್ಮಾತ್ ಕ್ಷಿಪಣಿ 10ಕ್ಕೂ ಅಧಿಕ ಪರಮಾಣಿ ಸಿಡಿತಲೆಯನ್ನು ಹೊತ್ತೊಯ್ಯುವ ಮತ್ತು ಯುರೋಪ್ ಹಾಗೂ ಅಮೆರಿಕವನ್ನೂ ದಾಟಿ ಸಾಗುವ ಸಾಮರ್ಥ್ಯ ಹೊಂದಿದೆ . ಸೈಬೀರಿಯಾದ ಕ್ರಸ್ನೋಯಾರ್ಸ್ಕ್ ವಲಯದಲ್ಲಿರುವ ಸೇನಾ ತುಕಡಿಯಲ್ಲಿ ಈ ಕ್ಷಿಪಣಿಯನ್ನು ನಿಯೋಜಿಸಲಾಗುವುದು. ಈ ತುಕಡಿಯಲ್ಲಿರುವ ಸೋವಿಯತ್ ಒಕ್ಕೂಟದ ಯುಗದ ವೊಯೆಯೊಡ ಕ್ಷಿಪಣಿಗೆ ಪರ್ಯಾಯವಾಗಿ ಸರ್ಮಾತ್ ಕ್ಷಿಪಣಿ ನಿಯೋಜನೆಗೊಳ್ಳಲಿದೆ. ಈ ಸೂಪರ್ ಶಕ್ತಿ ಕ್ಷಿಪಣಿಯು ರಶ್ಯದ ಮಕ್ಕಳು ಮತ್ತು ಮರಿಮಕ್ಕಳಿಗೆ ಮುಂದಿನ 30ರಿಂದ 40 ವರ್ಷದವರೆಗೆ ಭದ್ರತೆಯನ್ನು ಖಾತರಿಗೊಳಿಸಲಿದೆ ಎಂದು ರಶ್ಯದ ರೊಸ್ಕೊಸ್ಮೋಸ್ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥ ಡಿಮಿಟ್ರಿ ರೊಗೊಝಿನ್ ಹೇಳಿದ್ದಾರೆ.

 ಆದರೆ ಕ್ಷಿಪಣಿಯನ್ನು ಸೇನೆಗೆ ನಿಯೋಜನೆಗೂ ಮುನ್ನ ಇನ್ನಷ್ಟು ಹಂತದ ಪರೀಕ್ಷೆ ಅಗತ್ಯವಿರುವುದರಿಂದ ಶರತ್ಕಾಲದ ಅಂತ್ಯದೊಳಗೆ(ಸೆಪ್ಟಂಬರ್‌ನಿಂದ ಡಿಸೆಂಬರ್‌ವರೆಗೆ ಶರತ್ಕಾಲದ ಅವಧಿ) ನಿಯೋಜನೆ ಸಾಧ್ಯವಾಗದು ಎಂದು ಪಾಶ್ಚಿಮಾತ್ಯ ದೇಶಗಳ ಮಿಲಿಟರಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News