ಪಾಕಿಸ್ತಾನದ ಸೇನಾನೆಲೆಯ ಮೇಲೆ ಉಗ್ರರ ದಾಳಿ: 3 ಮಂದಿ ಸಾವು

Update: 2022-04-23 20:52 GMT

ಇಸ್ಲಮಾಬಾದ್, ಎ.23: ಅಫ್ಗಾನಿಸ್ತಾನದ ಉಗ್ರರು ಶುಕ್ರವಾರ ರಾತ್ರಿ ಗಡಿಯುದ್ದಕ್ಕೂ ಪಾಕಿಸ್ತಾನದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ 3 ಮಂದಿ ಮೃತಪಟ್ಟಿರುವುದಾಗಿ ಪಾಕಿಸ್ತಾನದ ಸೇನೆ ಹೇಳಿದೆ.

 ಉತ್ತರದ ವಝಿರಿಸ್ತಾನ ಪ್ರದೇಶದಲ್ಲಿರುವ ಸೇನಾ ನೆಲೆಯ ಮೇಲೆ ಅಫ್ಗಾನ್‌ನಲ್ಲಿನ ಉಗ್ರರು ಶೆಲ್‌ದಾಳಿ ನಡೆಸಿದ್ದರಿಂದ 3 ಮಂದಿ ಮೃತಪಟ್ಟಿದ್ದಾರೆ. ಈ ದಾಳಿಗೆ ಪಾಕ್ ಸೇನೆ ತಿರುಗೇಟು ನೀಡಿದರು ಎಂದು ಹೇಳಿಕೆ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಅಫ್ಗಾನಿಸ್ತಾನ ಹಾಗೂ ನೆರೆಯ ಪಾಕಿಸ್ತಾನದಲ್ಲಿ ಸರಣಿ ಆಕ್ರಮಣ ಮತ್ತು ಸ್ಫೋಟಗಳು ಸಂಭವಿಸಿವೆ. ಶುಕ್ರವಾರ ಅಫ್ಗಾನ್‌ನ ಉತ್ತರದ ಕುಂದುರ್ ಪ್ರಾಂತದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ 33 ಮಂದಿ ಸಾವನ್ನಪ್ಪಿದ್ದರು. ಜೊತೆಗೆ, ಪಾಕಿಸ್ತಾನದಲ್ಲೂ ಹಲವು ಸ್ಫೋಟಗಳು ಸಂಭವಿಸಿದ್ದು ಎರಡೂ ದೇಶಗಳಲ್ಲಿನ ಭದ್ರತೆಯ ಸ್ಥಿತಿ ಬಗ್ಗೆ ಆತಂಕಕ್ಕೆ ಕಾರಣವಾಗಿದೆ.

 ಕಳೆದ ಆಗಸ್ಟ್‌ನಲ್ಲಿ ಅಫ್ಗಾನ್‌ನಲ್ಲಿ ಅಧಿಕಾರಕ್ಕೆ ಬಂದ ತಾಲಿಬಾನ್‌ಗೆ ದೇಶದಲ್ಲಿ ಭದ್ರತೆಯನ್ನು ಖಾತರಿಪಡಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಫ್ಗಾನ್ ಮತ್ತು ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಐಸಿಸ್ ಉಗ್ರಸಂಘಟನೆಯ ಸಹಸಂಸ್ಥೆ ಐಸಿಸ್-ಕೆ ಅಫ್ಗಾನ್‌ನಲ್ಲಿ ಹಲವು ಸ್ಫೋಟಗಳನ್ನು ನಡೆಸಿದೆ. ಗುರುವಾರ ನಡೆದ ಸರಣಿ ಸ್ಫೋಟದ ಹೊಣೆಯನ್ನೂ ಈ ಸಂಘಟನೆ ವಹಿಸಿಕೊಂಡಿದೆ. ಜತೆಗೆ, ಪಾಕಿಸ್ತಾನಿ ತಾಲಿಬಾನಿ ಎಂದೇ ಹೆಸರಾಗಿರುವ ತೆಹ್ರೀಲ್-ಇ-ತಾಲಿಬಾನ್ ಪಾಕಿಸ್ತಾನ್ ಅಥವಾ ಟಿಟಿಪಿಯ ಸುಮಾರು 10,000 ಉಗ್ರರು ಅಫ್ಗಾನ್‌ನಲ್ಲಿ ಅಡಗುದಾಣ ಹೊಂದಿದ್ದು, ಪಾಕಿಸ್ತಾನದ ಸೇನಾ ನೆಲೆಯ ಮೇಲೆ ದಾಳಿ ನಡೆಸುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News