ಇರಾನ್: ಸೇನಾಧಿಕಾರಿಯ ಅಂಗರಕ್ಷಕನ ಗುಂಡಿಕ್ಕಿ ಹತ್ಯೆ

Update: 2022-04-23 20:55 GMT

ಟೆಹ್ರಾನ್, ಎ.23: ಇರಾನ್‌ನ ಸಶಸ್ತ್ರ ಪಡೆಯ ಸಹಸಂಸ್ಥೆ ರೆವೊಲ್ಯುಷನರಿ ಗಾರ್ಡ್ಸ್‌ನ ಸೇನಾಧಿಕಾರಿಯ ಅಂಗರಕ್ಷಕ ದುಷ್ಕರ್ಮಿಗಳ ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವುದಾಗಿ ಸರಕಾರಿ ನಿಯಂತ್ರಣದ ಇರ್ನಾ ಸುದ್ಧಿಸಂಸ್ಥೆ ಶನಿವಾರ ವರದಿ ಮಾಡಿದೆ.

 ಪ್ರಕ್ಷುಬ್ಧ ಆಗ್ನೇಯ ಪ್ರಾಂತ ಸಿಸ್ತಾನ್-ಬಲೂಚಿಸ್ತಾನ್‌ನಲ್ಲಿನ ಚೆಕ್‌ಪೋಸ್ಟ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಅಂಗರಕ್ಷಕನನ್ನು ಮಹ್ಮೂದ್ ಅಬ್ಸಲಾನ್ ಎಂದು ಗುರುತಿಸಲಾಗಿದ್ದು ಈತ ಸೇನೆಯ ಕಮಾಂಡರ್ ಪರ್ವಿರ್ ಅಬ್ಸಲಾನ್ ಅವರ ಪುತ್ರ. ಪ್ರಾಂತೀಯ ರಾಜಧಾನಿ ಝಹೆದನ್ ಪ್ರವೇಶಿಸುವ ರಸ್ತೆಯಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಕ್ರಿಮಿನಲ್‌ಗಳು ಏಕಾಏಕಿ ಗುಂಡಿನ ದಾಳಿ ನಡೆಸಿದರು. ದಾಳಿ ನಡೆಸಿದ ದುಷ್ಕರ್ಮಿಗಳನ್ನು ಭದ್ರತಾ ಪಡೆ ಬಂಧಿಸಿವೆ ಎಂದು ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ವರದಿ ಮಾಡಿದೆ.

ಪಾಕ್ ಮತ್ತು ಅಫ್ಗಾನ್ ಗಡಿಭಾಗದಲ್ಲಿರುವ ಸಿಸ್ತಾನ್ - ಬಲೂಚಿಸ್ತಾನ್ ಪ್ರಾಂತದಲ್ಲಿ ಹಲವು ಸಮಸ್ಯೆಗಳಿದ್ದು ಸ್ಮಗ್ಲಿಂಗ್ ಮತ್ತಿತರ ಕ್ರಿಮಿನಲ್ ಕೃತ್ಯಗಳು ಹೆಚ್ಚಿವೆ. ಜತೆಗೆ, ಇಲ್ಲಿನ ಬಲೂಚಿ ಅಲ್ಪಸಂಖ್ಯಾತರು ಪ್ರತ್ಯೇಕತೆಯ ಬೇಡಿಕೆ ಮುಂದಿರಿಸಿದ್ದಾರೆ. ಈ ಪ್ರಾಂತದಲ್ಲಿ ಭದ್ರತಾ ಪಡೆ ಹಾಗೂ ಸಶಸ್ತ್ರ ಬಂಡುಗೋರರ ತಂಡದ ಮಧ್ಯೆ ನಿರಂತರ ಸಂಘರ್ಷ ನಡೆಯುತ್ತಿದೆ.

ಇಸ್ರೇಲ್‌ನ ಮೊಸಾದ್ ಗುಪ್ತಚರ ಸಂಸ್ಥೆಯ ಜತೆ ಸಂಪರ್ಕದಲ್ಲಿದ್ದ 3 ಮಂದಿಯನ್ನು ಬಂಧಿಸಿರುವುದಾಗಿ ಇರಾನ್ ಹೇಳಿಕೆ ನೀಡಿದ 3 ದಿನದ ಬಳಿಕ ಶನಿವಾರದ ಮಾರಣಾಂತಿಕ ಗುಂಡಿನ ದಾಳಿ ಪ್ರಕರಣ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News