ನೈಜೀರಿಯಾ: ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟ; 100ಕ್ಕೂ ಅಧಿಕ ಮಂದಿ ಮೃತ್ಯು

Update: 2022-04-24 17:03 GMT

ಅಬೂಜ, ಎ.24: ನೈಜೀರಿಯಾದ ಆಗ್ನೇಯ ಪ್ರಾಂತದಲ್ಲಿನ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.
 

ದಟ್ಟ ಅರಣ್ಯದೊಳಗೆ, ನದಿ ದಡದಲ್ಲಿ ಈ ಅಕ್ರಮ ತೈಲ ಸಂಸ್ಕರಣಾಗಾರ ಕಾರ್ಯನಿರ್ವಹಿಸುತ್ತಿತ್ತು. ಸಂಸ್ಕರಣಾಗಾರದ ಭೂಗತ ದಾಸ್ತಾನು ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಶೀಘ್ರವೇ ಸಂಪೂರ್ಣ ಕಟ್ಟಡವನ್ನು ಆವರಿಸಿ ಸ್ಫೋಟ ಸಂಭವಿಸಿದೆ. ಅಲ್ಲಿ ಕೆಲಸ ಮಾಡುತ್ತಿದ್ದ 100ಕ್ಕೂ ಅಧಿಕ ಮಂದಿ ಬೆಂಕಿಗೆ ಸಿಲುಕಿ ಮೃತಪಟ್ಟಿದ್ದು ಅವರ ದೇಹ ಗುರುತಿಸಲಾಗದ ರೀತಿಯಲ್ಲಿ ಸುಟ್ಟುಹೋಗಿದೆ. ಅಲ್ಲಿಂದ ತೈಲ ಸಾಗಿಸಲು ಸರತಿ ಸಾಲಿನಲ್ಲಿ ನಿಂತಿದ್ದ ಹಲವಾರು ವಾಹನಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ ಎಂದು ಇಮೊ ಪ್ರದೇಶದ ಕಮಿಷನರ್ ಗುಡ್ಲಕ್ ಒಪಯ್ಯರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿಮಾಡಿದೆ.

ಸ್ಫೋಟಕ್ಕೆ ಕಾರಣ, ಸಾವು ನೋವಿನ ನಿಖರ ಪ್ರಮಾಣ ಮತ್ತು ಆಗಿರುವ ಹಾನಿಯನ್ನು ನಿರ್ಧರಿಸಲು ತನಿಖೆಗೆ ಆದೇಶಿಸಲಾಗಿದೆ ಎಂದು ದೇಶದ ಮಾಹಿತಿ ಆಯುಕ್ತ ಡೆಕ್ಲಾನ್ ಎಮೆಲುಂಬ ಹೇಳಿದ್ದಾರೆ. ನೈಜೀರಿಯಾದಲ್ಲಿ ಕಚ್ಛಾತೈಲವನ್ನು ಅಕ್ರಮವಾಗಿ ಸಂಸ್ಕರಿಸುವ ದಂಧೆ ವ್ಯಾಪಕವಾಗಿದೆ. ಹಲವರು ಕಚ್ಛಾತೈಲ ಸಾಗಿಸುವ ಪೈಪ್ಗಳಿಗೆ ಕನ್ನಕೊರೆದು ಸಂಗ್ರಹಿಸಿದ ಕಚ್ಛಾತೈಲವನ್ನು ಸಂಸ್ಕರಿಸಿ ಅಕ್ರಮವಾಗಿ ಮಾರಾಟ ಮಾಡುವುದನ್ನೇ ಉದ್ಯೋಗವನ್ನಾಗಿಸಿಕೊಂಡಿದ್ದಾರೆ. ಅಕ್ಟೋಬರ್ನಲ್ಲಿ ಮತ್ತೊಂದು ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮಕ್ಕಳ ಸಹಿತ 25 ಮಂದಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News