×
Ad

ರಷ್ಯಾ ದಾಳಿ ಪ್ರಶ್ನಿಸದಿದ್ದರೆ ಇಂಡೋ-ಫೆಸಿಫಿಕ್ ಮೇಲೂ ಗಂಭೀರ ಪರಿಣಾಮ: ಯೂರೋಪಿಯನ್ ಆಯೋಗ ಎಚ್ಚರಿಕೆ

Update: 2022-04-24 07:52 IST

ಹೊಸದಿಲ್ಲಿ: ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ನ್ಯಾಯಸಮ್ಮತವಲ್ಲದ ದಾಳಿಯನ್ನು ಪ್ರಶ್ನಿಸಿದಿದ್ದರೆ ಉದ್ವಿಗ್ನತೆ ಹೊಗೆಯಾಡುತ್ತಿರುವ ಇಂಡೋ ಫೆಸಿಫಿಕ್ ಸೇರಿದಂತೆ ಎಲ್ಲೆಡೆ "ಮೈಟ್ ಮೇಕ್ಸ್ ರೈಟ್" ಎಂಬ ವಿಶ್ವದ ಸೃಷ್ಟಿಗೆ ಕಾರಣವಾದೀತು ಎಂದು ಯೂರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್ ಎಚ್ಚರಿಕೆ ನೀಡಿದ್ದಾರೆ.

ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ರವಿವಾರ ಆಗಮಿಸಲಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಜತೆ ಮಾತನಾಡುವರು ಹಾಗೂ ರೈಸಿನಾ ಚರ್ಚೆ ನಡೆಸುವರು. ತಮ್ಮ ಭೇಟಿ ವೇಳೆ, ಆಕ್ರಮಣವನ್ನು ನಿಲ್ಲಿಸುವ ಅಗತ್ಯತೆಯನ್ನು ಪ್ರತಿಪಾದಿಸಿ ಉಕ್ರೇನ್ ಯುದ್ಧದ ಬಗ್ಗೆ ಭಾರತದ ಜತೆ ಚರ್ಚಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಉಕ್ರೇನ್‍ನಲ್ಲಿ ರಕ್ತಪಾತವನ್ನು ಮುಂದುವರಿಸುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಪ್ರಯತ್ನಗಳನ್ನು ತಡೆಯಲು ಇತರ ದೇಶಗಳು ಕೈಜೋಡಿಸುವಂತೆ ಯೂರೋಪಿಯನ್ ಒಕ್ಕೂಟ ಆಹ್ವಾನಿಸುತ್ತಿದೆ. ಏಕೆಂದರೆ ರಷ್ಯಾದ ಅತಿಕ್ರಮಣ ಕೇವಲ ಒಂದು ದೇಶಕ್ಕೆ ಅಪಾಯ ತರುವಂಥದ್ದಲ್ಲ; ಬದಲಾಗಿ ಇಡೀ ವಿಶ್ವಕ್ಕೆ ಅಪಾಯಕಾರಿ ಎಂದು ಭಾರತ ಭೇಟಿಗೆ ಮುನ್ನ ನೀಡಿದ ಸಂದರ್ಶನದಲ್ಲಿ ಹೇಳಿದರು.

ಉಕ್ರೇನ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಕೂಡಾ ದಾಳಿ ನಡೆಯುವ ಸಂಭಾವ್ಯತೆ ಬಗ್ಗೆ ಪ್ರಶ್ನಿಸಿದಾಗ, "ಈ ದಾಳಿಯನ್ನು ಯಾರೂ ಪ್ರಶ್ನಿಸದಿದ್ದರೆ, ತೋಳ್ಬಲವೇ ಸರಿ ಎಂಬ ವಿಶ್ವವನ್ನು ನಾವು ಕಾಣಬೇಕಾಗುತ್ತದೆ. ಯೂರೋಪಿಯನ್ ಒಕ್ಕೂಟದಲ್ಲಿ ಕಾನೂನು ಶ್ರೇಷ್ಠವೇ ವಿನಃ ಬಂದೂಕಿನ ಆಡಳಿತವಲ್ಲ" ಎಂದು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News