ಖರ್ಗೋನ್ ಹಿಂಸಾಚಾರ:175 ಜನರ ಸೆರೆ,64 ಎಫ್ಐಆರ್ಗಳು ದಾಖಲು
ಭೋಪಾಲ,ಎ.24: ಖರ್ಗೋನ್ನಲ್ಲಿ ಎ.10ರಂದು ರಾಮನವಮಿ ಸಂದರ್ಭ ಸಂಭವಿಸಿದ್ದ ಕೋಮು ಘರ್ಷಣೆಗಳಿಗೆ ಸಂಬಂಧಿಸಿದಂತೆ 175 ಜನರನ್ನು ಬಂಧಿಸಲಾಗಿದ್ದು,64 ಎಫ್ಐಆರ್ಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಖರ್ಗೋನ್ ಎಸ್ಪಿ ರೋಹಿತ್ ಕಶ್ವಾನಿ ತಿಳಿಸಿದ್ದಾರೆ. ಸ್ಥಳೀಯಾಡಳಿತವು ಖರ್ಗೋನ್ನಲ್ಲಿ ರವಿವಾರ ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಕರ್ಫ್ಯೂವನ್ನು ಸಡಿಲಿಸಿತ್ತು. ಆದಾಗ್ಯೂ ರಾತ್ರಿ ಕರ್ಫ್ಯೂ ಮುಂದುವರಿಯುತ್ತದೆ ಎಂದು ಕಶ್ವಾನಿ ತಿಳಿಸಿದರು.
ನಗರದಲ್ಲಿ ಎ.10ರಿಂದ ಕರ್ಫ್ಯೂ ಹೇರಲಾಗಿದ್ದು,ಎ.14ರಿಂದ ಪ್ರತಿದಿನ ಎರಡು ಗಂಟೆಗಳ ಅವಧಿಗೆ ಕರ್ಫ್ಯೂ ಸಡಿಲಿಸಲಾಗುತ್ತಿದೆ.
ಈ ನಡುವೆ ಎಸ್ಪಿ ಸಿದ್ದಾರ್ಥ ಚೌಧರಿಯವರ ಮೇಲೆ ಗುಂಡು ಹಾರಿಸಿದ್ದ ಆರೋಪಿ ಮೊಹ್ಸೀನ್ ಅಲಿಯಾಸ್ ವಸೀಂ ಎಂಬಾತನನ್ನು ಶನಿವಾರ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು,ಆತನಿಗೆ ಮೂರು ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಲಾಗಿದೆ. ಮೊಹ್ಸೀನ್ನನ್ನು ಪ್ರಶ್ನಿಸಲಾಗುತ್ತಿದೆ ಮತ್ತು ತಾಂತ್ರಿಕ ಸಾಕ್ಷಾಧಾರಗಳ ಆಧಾರದಲ್ಲಿ ಇತರ ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದೂ ಕಶ್ವಾನಿ ತಿಳಿಸಿದರು.