ರಾಮನ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ; ವಿವಿ ಪ್ರಾಧ್ಯಾಪಕಿ ವಜಾ

Update: 2022-04-25 02:21 GMT

ಫಗ್ವಾರ: ಹಿಂದೂಗಳ ಪವಿತ್ರ ದೇವರಾದ ರಾಮನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಪ್ರಾಧ್ಯಾಪಕಿ ಒಬ್ಬರನ್ನು ವಜಾ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿಯ ಸಹಾಯಕ ಪ್ರೊ. ಗುರ್ಸಂಗ್ ಪ್ರೀತ್ ಕೌರ್ ಅವರು ರಾಮನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು.

"ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾದ ವೀಡಿಯೊದಿಂದ ಕೆಲ ಮಂದಿಯ ಭಾವನೆಗಳಿಗೆ ಧಕ್ಕೆಯಾಗಿದೆ ಎನ್ನುವುದು ನಮಗೆ ಅರ್ಥವಾಗಿದೆ. ಈ ವೀಡಿಯೊದಲ್ಲಿ ನಮ್ಮ ಬೋಧಕ ಸಿಬ್ಬಂದಿಯೊಬ್ಬರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹಂಚಿಕೊಂಡಿರುವುದು ಕೇಳಿ ಬಂದಿದೆ" ಎಂದು ಖಾಸಗಿ ವಿವಿ ಹೇಳಿಕೆ ನೀಡಿದೆ.

"ಅವರು ವ್ಯಕ್ತಪಡಿಸಿದ ಅಭಿಪ್ರಾಯ ವೈಯಕ್ತಿಕವಾಗಿದ್ದು, ವಿಶ್ವವಿದ್ಯಾನಿಲಯ ಅದನ್ನು ದೃಢೀಕರಿಸುವುದಿಲ್ಲ. ನಮ್ಮದು ಸದಾ ಜಾತ್ಯತೀತ ವಿಶ್ವವಿದ್ಯಾನಿಲಯ. ಎಲ್ಲ ಧರ್ಮ ಹಾಗೂ ನಂಬಿಕೆಗಳ ಜನರನ್ನು ಇಲ್ಲಿ ಪ್ರೀತಿ ಮತ್ತು ಗೌರವದಿಂದ ಸಮಾನವಾಗಿ ಪರಿಗಣಿಸಲಾಗುತ್ತದೆ.  ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಮುಕ್ತಗೊಳಿಸಲಾಗಿದೆ. ಆದಾಗ್ಯೂ ಇಡೀ ಘಟನೆ ಬಗ್ಗೆ ನಾವು ತೀವ್ರ ದುಃಖ ವ್ಯಕ್ತಪಡಿಸುತ್ತೇವೆ" ಎಂದು ವಿವರಿಸಲಾಗಿದೆ.

ಸಹಾಯಕ ಪ್ರಾಧ್ಯಾಪಕರನ್ನು ಶನಿವಾರ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ವಿವಿ ಉಪಾಧ್ಯಕ್ಷ ಅಮನ್ ಮಿತ್ತಲ್ ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News