ಹಿರಿಯ ಕಾಂಗ್ರೆಸ್ ನಾಯಕ ಕೆ. ಶಂಕರನಾರಾಯಣನ್ ನಿಧನ

Update: 2022-04-25 04:34 GMT
Photo: twitter

ಪಾಲಕ್ಕಾಡ್: ದಶಕಗಳ ಕಾಲದ ತಮ್ಮ ವೃತ್ತಿ ಜೀವನದಲ್ಲಿ ವಿವಿಧ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಕೆ. ಶಂಕರನಾರಾಯಣನ್ ಅವರು ಕೇರಳದ ಪಾಲಕ್ಕಾಡ್‌ನಲ್ಲಿರುವ ತಮ್ಮ ನಿವಾಸದಲ್ಲಿ ರವಿವಾರ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಶಂಕರನಾರಾಯಣ ಅವರ ಪತ್ನಿ ರಾಧಾ ಅವರು ಈ ಹಿಂದೆಯೇ ತೀರಿಕೊಂಡಿದ್ದು,ಅವರು ತಮ್ಮ ಪುತ್ರಿ ಅನುಪಮಾ ಅವರನ್ನು ಅಗಲಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಶಂಕರನಾರಾಯಣನ್ ಅವರು ಮಹಾರಾಷ್ಟ್ರ, ನಾಗಾಲ್ಯಾಂಡ್ ಹಾಗೂ  ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಅವರು ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಗೋವಾದ ರಾಜ್ಯಪಾಲರಾಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ನಿಭಾಯಿಸಿದ್ದರು.

ಹಿರಿಯ ಕಾಂಗ್ರೆಸ್ ನಾಯಕ ಶಂಕರನಾರಾಯಣನ್ ನಾಲ್ಕು ಬಾರಿ ಶಾಸಕರಾಗಿದ್ದರು. ಕೇರಳದ ವಿವಿಧ ಸರಕಾರಗಳಲ್ಲಿ ಹಣಕಾಸು, ಅಬಕಾರಿ ಹಾಗೂ  ಕೃಷಿ ಖಾತೆಗಳನ್ನು ನಿಭಾಯಿಸಿದ್ದರು.

ಅವರ ಪಾರ್ಥಿವ ಶರೀರವನ್ನು ಅವರ ನಿವಾಸ ಮತ್ತು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಸೋಮವಾರ ಸಂಜೆ 5.30ಕ್ಕೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ,  ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಸೇರಿದಂತೆ ರಾಜಕೀಯ ನಾಯಕರು ಶಂಕರನಾರಾಯಣನ್  ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News