'ತಿರಂಗಾ ಯಾತ್ರಾ' ನಡೆಸಿ ಕೋಮು ಸೌಹಾರ್ದತೆಯ ಸಂದೇಶ ಸಾರಿದ ಜಹಾಂಗೀರ್​​ಪುರಿ ನಿವಾಸಿಗಳು

Update: 2022-04-25 05:58 GMT

ಹೊಸದಿಲ್ಲಿ: ಹನುಮಾನ್ ಜಯಂತಿ ದಿನ ಮೆರವಣಿಗೆ ವೇಳೆ ಹಿಂಸಾಚಾರಕ್ಕೆ ಸಾಕ್ಷಿಯಾದ ರಾಜಧಾನಿಯ ಜಹಾಂಗೀರ್​​ಪುರಿ ಪ್ರದೇಶದ ಸುಮಾರು 200 ಮಂದಿ ಹಿಂದು ಮತ್ತು ಮುಸ್ಲಿಮ್ ನಿವಾಸಿಗಳು ರವಿವಾರ ಸಂಜೆ 'ತಿರಂಗಾ ಯಾತ್ರಾ' ನಡೆಸಿ ಕೋಮು ಸೌಹಾರ್ದತೆಯ ಸಂದೇಶ ಸಾರಿದ್ದಾರೆ ಎಂದು The Hindu ವರದಿ ಮಾಡಿದೆ.

ಮೆರವಣಿಗೆಯಲ್ಲಿ ಭಾಗವಹಿಸಿದವರೆಲ್ಲರೂ ಭಾರತದ ತ್ರಿವರ್ಣ ಧ್ವಜವನ್ನು ಕೈಯ್ಯಲ್ಲಿ ಹಿಡಿದುಕೊಂಡಿದ್ದರಲ್ಲದೆ 'ಹಿಂದು ಮುಸ್ಲಿಂ ಸಿಖ್ ಇಸಾಯಿ ಆಪಸ್ ಮೇ ಹೇ ಭಾಯಿ ಭಾಯಿ' ( ಹಿಂದುಗಳು, ಮುಸ್ಲಿಮರು, ಸಿಖರು, ಕ್ರೈಸ್ತರು ಎಲ್ಲರೂ ಸಹೋದರರು), ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಕೂಗಿದ್ದಾರೆ.

ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತಾದರೂ ಹಲವಾರು ಬ್ಯಾರಿಕೇಡುಗಳನ್ನು ತೆಗೆಯಲಾಗಿತ್ತು.

ಕಳೆದ ವಾರ ಉತ್ತರ ದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್ ಒತ್ತುವರಿ ತೆರವು ಕಾರ್ಯಾಚರಣೆಯ ಭಾಗವಾಗಿ ಹಲವಾರು ಕಟ್ಟಡಗಳನ್ನು ನೆಲಸಮಗೊಳಿಸಿದ ಸಿ ಬ್ಲಾಕ್‍ನಿಂದ ಆರಂಭಗೊಂಡ ಮೆರವಣಿಗೆ ಹೆಚ್ಚಾಗಿ ಹಿಂದುಗಳೇ ವಾಸಿಸುವ ಸಿ ಬ್ಲಾಕ್‍ನತ್ತ ಸಾಗಿತ್ತಲ್ಲದೆ ಸುಮಾರು 30 ನಿಮಿಷಗಳಲ್ಲಿ ಕೊನೆಗೊಂಡಿದೆ.

ಈ ತಿರಂಗಾ ಯಾತ್ರೆಯ ಸಂದರ್ಭ ಪ್ರದೇಶದ ಹಲವಾರು ಅಂಗಡಿಗಳು ಹಾಗೂ ಮನೆಗಳ ಮುಂದೆ ಭಾರತದ ರಾಷ್ಟ್ರಧ್ವಜ ಹಾರಾಡುತ್ತಿತ್ತು.

ಹನುಮಾನ್ ಜಯಂತಿ ಸಂದರ್ಭ ಹಿಂಸೆಯಲ್ಲಿ ತೊಡಗಿಕೊಂಡವರು ಹೊರಗಿನವರಾಗಿದ್ದಾರೆ ಹಾಗೂ ಈ ಮೆರವಣಿಗೆ ಶಾಂತಿಯತ್ತ ಮೊದಲ ಹೆಜ್ಜೆ ಎಂದು ಅಲ್ಲಿನ ವರ್ತಕರೊಬ್ಬರು ಹೇಳಿದ್ದಾರೆ.

"ಹಲವರು ಸ್ಥಳೀಯ ಮುಸ್ಲಿಮರನ್ನು ಬಾಂಗ್ಲಾದೇಶಿಗಳು ಮತ್ತು ಪತ್ತರ್‍ಬಾಝ್ ಎಂದು ಹೀಗಳೆದಿದ್ದರು ಆದರೆ ಇಂದು ಎಲ್ಲರೂ ಎಲ್ಲವನ್ನೂ ಮರೆತು ನನ್ನನು ಆಲಂಗಿಸಿದ್ದಾರೆ. ನಾವೆಲ್ಲರೂ ಸಹೋದರರಂತೆ ಬಾಳಬೇಕು, ಪರಿಸ್ಥಿತಿ ಸುಧಾರಿಸಬಹುದು,'' ಎಂಬ ಆಶಾವಾದವನ್ನು ಸ್ಥಳೀಯ ನಿವಾಸಿ, ಮೊಬೈಲ್ ಫೋನ್ ಮಾರಾಟಗಾರ ಇಶ್ರಾರ್ ಖಾನ್ ಹೇಳುತ್ತಾರೆ. ಅವರ ಅಂಗಡಿಯ ಒಂದು ಭಾಗವನ್ನು ಇತ್ತೀಚಿಗಿನ ತೆರವು ಕಾರ್ಯಾಚರಣೆ ವೇಳೆ ನೆಲಸಮಗೊಳಿಸಲಾಗಿತ್ತು.

ಈ ತಿರಂಗಾ ಯಾತ್ರಾ ಕುರಿತು ಪ್ರತಿಕ್ರಿಯಿಸಿದ ಡಿಸಿಪಿ ಉಷಾ ರಂಗ್ನಾನಿ, ತ್ರಿವರ್ಣವು ಎಲ್ಲಕ್ಕಿಂತಲೂ ಮಿಗಿಲು ಎಂದು ಎರಡೂ ಸಮುದಾಯದವರು ತೋರಿಸಿಕೊಟ್ಟಿದ್ದಾರೆ. ದೇಶ ಮೊದಲು ಎಂಬ ಸಂದೇಶವನ್ನೂ ಸಾರಿದ್ದಾರೆ,'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News