ಬಂದೂಕು ತೋರಿಸಿ ಮಕ್ಕಳು, ಮಹಿಳೆಯರನ್ನು ಬೆದರಿಸಿದ ʼಜಾಮಿಯಾ ಶೂಟರ್‌ʼ ರಾಮ್‌ಭಕ್ತ್‌ ಗೋಪಾಲ್‌

Update: 2022-04-25 06:15 GMT

ಮೇವಾತ್: 2020 ರಲ್ಲಿ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಬಳಿ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ ರಾಮ್‌ಭಕ್ತ್‌ ಗೋಪಾಲ್‌ ಎಂಬಾತ ಇದೀಗ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾನೆ. ಬಂದೂಕು ಹಿಡಿದು ಪ್ರಚೋದನಾತ್ಮಕ ವಿಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಆತ ಪೋಸ್ಟ್‌ ಮಾಡಿದ್ದಾನೆ.

ಪೊಲೀಸರ ಸಮ್ಮುಖದಲ್ಲಿ ಬಹಿರಂಗವಾಗಿ ಗುಂಡು ಹಾರಿಸಿ, ಸದ್ಯ ಜಾಮೀನು ಮುಖಾಂತರ ಹೊರಬಂದಿರುವ ರಾಮ್‌ ಭಕ್ತ್‌ ಗೋಪಾಲ್‌, ಪಿಸ್ತೂಲ್‌ ತೋರಿಸಿ, ಮಕ್ಕಳನ್ನು, ಮಹಿಳೆಯರನ್ನು ಬೆದರಿಸುವ ವಿಡಿಯೋ ಮಾಡಿ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೋದ ವಿರುದ್ಧ ಹಲವಾರು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಬಳಿಕ ಆತ ತನ್ನ ಖಾತೆಯನ್ನು ಖಾಸಗಿ ಖಾತೆಯನ್ನಾಗಿ ಮಾಡಿಕೊಂಡಿದ್ದಾನೆ.
 
ಕಳೆದ ವರ್ಷ ಪಟೌಡಿಯಲ್ಲಿ ನಡೆದ 'ಮಹಾಪಂಚಾಯತ್' ವೇಳೆ ಮುಸ್ಲಿಂ ಸಮುದಾಯದ ವಿರುದ್ಧ ಕೋಮುವಾದಿ ಭಾಷಣ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ಆತನಿಗೆ  ಹರಿಯಾಣ ನ್ಯಾಯಾಲಯವು ಜಾಮೀನು ನೀಡಿತ್ತು.
 
 ಆತನ ವೈರಲ್‌ ಆಗಿರುವ ಒಂದು ವಿಡಿಯೋದಲ್ಲಿ, ಚಲಿಸುತ್ತಿರುವ ಕಾರಿನಲ್ಲಿ ಬಂದೂಕು ತೋರಿಸಿ ಬಾಲಕನೊಬ್ಬನನ್ನು ಬೆದರಿಸುತ್ತಿರುವುದು ಕಂಡು ಬಂದಿದೆ. ಬಂದೂಕು ನೋಡಿದ ಬಾಲಕ ಕೊನೆಗೆ ಅಲ್ಲಿಂದ ಓಡಿ ಹೋದ ಮೇಲೆ, ಗೋಪಾಲ್‌ ನ ಕಾರು ಮುಂದೆ ಚಲಿಸುತ್ತದೆ. ನಂತರ, ಮಹಿಳೆಯರು ಮತ್ತು ಮಕ್ಕಳು ಮಾತ್ರ ಇರುವ ಮನೆಯೆದುರು ಕಾರು ನಿಲ್ಲಿಸಿ, ಅವರನ್ನು ಬೆದರಿಸುವುದು ಕಂಡು ಬರುತ್ತದೆ. ಅವರು ಮನೆಯೊಳಗೆ ತೆರಳಿ ಬಾಗಿಲು ಮುಚ್ಚುವವರೆಗೂ ರಾಮ್‌ಭಕ್ತ್‌ ತನ್ನ ಗಾಡಿಯನ್ನು ಅಲ್ಲಿ ನಿಲ್ಲಿಸಿರುತ್ತಾನೆ. ಈ ವಿಡಿಯೋಗೆ “ಗೋ ರಕ್ಷಾ ದಳ, ಮೇವತ್ ರಸ್ತೆ, ಹರಿಯಾಣ” ಎಂಬ ಶೀರ್ಷಿಕೆ ನೀಡಲಾಗಿದೆ ಎಂದು ndtv.com ವರದಿ ಮಾಡಿದೆ.  ಇಂತಹ ಹಲವಾರು ವಿಡಿಯೋಗಳು ಆತನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿದೆ. 

ಬಂದೂಕುಗಳೊಂದಿಗೆ, ವಿವಿಧ ಆಯುಧಗಳೊಂದಿಗೆ ಹಾಗೂ ಬೌನ್ಸರ್‌ಗಳೊಂದಿಗೆ ಇರುವ ಚಿತ್ರಗಳು, ವಿಡಿಯೋಗಳು ಹೇರಳವಾಗಿದ್ದು, ವಿಡಿಯೋಗಳಿಗೆ ರೋಮಾಂಚಕ ಸಂಗೀತಗಳನ್ನು ಬಳಸಿ ಪೋಸ್ಟ್‌ ಮಾಡಲಾಗಿದೆ. 

ಇನ್ನೊಂದು ವಿಡಿಯೋದಲ್ಲಿ ಬಂದೂಕುಧಾರಿ ಗುಂಪೊಂದು ವ್ಯಕ್ತಿಯೊಬ್ಬನನ್ನು ಬಲವಂತವಾಗಿ ಎಳೆದು ಕಾರಿನೊಳಗೆ ತುರುಕುವ ದೃಶ್ಯ ಸೆರೆಯಾಗಿದೆ. “ಗೋ ಕಳ್ಳಸಾಗಾಣಿಕೆದಾರನನ್ನು ಕರೆದುಕೊಂಡು ಹೋಗುವುದು" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಇದಕ್ಕೆ ಹಲವಾರು ಬಲಪಂಥೀಯರು ಬೆಂಬಲಿಸಿ ಕಮೆಂಟುಗಳನ್ನು ಹಾಕಿದ್ದಾರೆ ಎಂದು ವರದಿಯಾಗಿದೆ. 

ಇನ್‌ಸ್ಟಾಗ್ರಾಮ್‌ನಲ್ಲಿ 13,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ರಾಮ್‌ಬಕ್ತ್‌ ಗೋಪಾಲ್ ಉತ್ತರ ಪ್ರದೇಶದ ಜೇವಾರ್‌ನ ನಿವಾಸಿಯಾಗಿದ್ದು, ತನ್ನನ್ನು ತಾನು “ನಾಥುರಾಮ್‌ ಗೋಡ್ಸೆ 2.0” ಎಂದು ಕರೆದುಕೊಳ್ಳುತ್ತಾನೆ. ಖಾಸಗಿ ಅಂಗರಕ್ಷಕರು ಮತ್ತು ಶಸ್ತ್ರಾಸ್ತ್ರಗಳನ್ನು ಒಳಗೊಂಡಿರುವ ಪ್ರಚೋದನಕಾರಿ ಚಿತ್ರಗಳು ಮತ್ತು ವೀಡಿಯೊಗಳನ್ನು ನಿಯಮಿತವಾಗಿ ಪೋಸ್ಟ್ ಮಾಡುತ್ತಿರುವ ಆತ, ತನ್ನನ್ನು ತಾನು ಗೋರಕ್ಷಕ ಎಂದು ಬಿಂಬಿಸಿಕೊಂಡಿದ್ದಾನೆ. ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವ ಮೊದಲೇ ಆತ ಸಾಮಾಜಿಕ ಮಾಧ್ಯಮಗಳಲ್ಲಿ ಆಯುಧಗಳೊಂದಿಗೆ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದ. ಅಲ್ಲದೆ, “ಶಹೀನ್‌ ಭಾಗ್‌ ಗೇಮ್‌ ಓವರ್” “ನಾನು ಆಝಾದಿಯನ್ನು ಕೊಡುತ್ತೇನೆ” ಎಂದು ಸಿಎಎ ವಿರೋಧೀ ಪ್ರತಿಭಟನಾಕಾರರನ್ನು ಗುರಿಯಾಗಿಸಿ ಪೋಸ್ಟ್‌ ಮಾಡಿದ್ದ.  ಅಲ್ಲದೆ, ಜಾಮಿಯಾದ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಗುಂಡು ಹಾರಿಸುವ ಮೊದಲು ಫೇಸ್‌ಬುಕ್‌ ಲೈವ್‌ ನಲ್ಲಿ ಕೂಡಾ ಆತ ಬಂದಿದ್ದ ಎಂದು ndtv ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News