ಎ.27ರಂದು ಐವನ್ ಡಿಸೋಜ ನೇತೃತ್ವದಲ್ಲಿ ಇಫ್ತಾರ್ ಕೂಟ
ಮಂಗಳೂರು, ಎ.25: ಮಾಜಿ ಶಾಸಕ, ಮಾಜಿ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ನೇತೃತ್ವದಲ್ಲಿ 6ನೇ ವರ್ಷದ ಇಫ್ತಾರ್ ಕೂಟ ಹಾಗೂ ಸೌಹಾರ್ದ ಸಭೆ ಎ.27ರಂದು ಸಂಜೆ 5ರಿಂದ ನಗರದ ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಾಜಿ ಕಾರ್ಪೊರೇಟರ್ ಜೆ. ನಾಗೇಂದ್ರ ಕುಮಾರ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ರಮಝಾನ್ ಆಚರಣೆಯ 25ನೇ ದಿನದಂದು ಇಫ್ತಾರ್ ಕೂಟ ಆಯೋಜಿಸಲಾಗಿದೆ. ಐವನ್ ಡಿಸೋಜ ನೇತೃತ್ವದಲ್ಲಿ ಸರ್ವಧರ್ಮವನ್ನು ಗೌರವಿಸುವ ಮತ್ತು ಏಕತೆಯೊಂದಿಗೆ ಒಗ್ಗೂಡಿಸುವಂತ ಉದ್ದೇಶದೊಂದಿಗೆ ದೀಪಾವಳಿ, ಕ್ರಿಸ್ಮಸ್, ಇಫ್ತಾರ್ ಕೂಟವನ್ನು ಕಳೆದ ಹಲವಾರು ವರ್ಷಗಳಿಂದ ಆಚರಿಸಲಾಗುತ್ತಿದೆ. ಈ ಬಾರಿಯ ಇಫ್ತಾರ್ ಕೂಟದಲ್ಲಿ ಬೋಳಾರ ಹಳೇಕೋಟೆ ಮುಖ್ಯಪ್ರಾಣ ದೇವಸ್ಥಾನದ ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್, ಶಾಂತಿಪ್ರಕಾಶನದ ಅಧ್ಯಕ್ಷ ಮುಹಮ್ಮದ್ ಕುಂಞಿ, ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲ ರಾಬರ್ಟ್ ಡಿಸೋಜ ಶುಭ ಸಂದೇಶ ನೀಡಲಿದ್ದಾರೆ. ಈ ಸಭೆಯಲ್ಲಿ ಧಾರ್ಮಿಕ ಮುಖಂಡರು, ರಾಜಕೀಯ ಪಕ್ಷದ ನಾಯಕರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರುಗಳು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ರಾಜ್ಯ ನಾಯಕ ಆಶಿತ್ ಜಿ. ಪಿರೇರ, ಮಾಜಿ ಕಾರ್ಪೊರೇಟರ್ ಭಾಸ್ಕರ್ ರಾವ್ ಶಾಂತಿನಗರ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮಾನಂದ ಪೂಜಾರಿ, ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಲಾಸ್ ಅತ್ತಾವರ ಉಪಸ್ಥಿತರಿದ್ದರು.