ತಮಿಳುನಾಡು: ಪ್ಲಾಟ್‌ಫಾರ್ಮ್‌ಗೆ ಡಿಕ್ಕಿ ಹೊಡೆದ ಲೋಕಲ್ ರೈಲು

Update: 2022-04-25 07:38 GMT
photo:twitter

ಚೆನ್ನೈ: 12 ಬೋಗಿಗಳ ಉಪನಗರ ರೈಲು ರವಿವಾರ ಚೆನ್ನೈ ಬೀಚ್ ನಿಲ್ದಾಣದ ಪ್ಲಾಟ್‌ಫಾರ್ಮ್ ಒಂದರ ಡೆಡ್-ಎಂಡ್‌ನಲ್ಲಿ ಹಳಿಗಳಿಂದ ಕೆಳಗಿಳಿದು ಪ್ಲಾಟ್‌ಫಾರ್ಮ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದಾಗ ರೈಲಿನಲ್ಲಿ ಪ್ರಯಾಣಿಕರಿಲ್ಲದ ಕಾರಣ ಹಾಗೂ  ಪ್ಲಾಟ್‌ಫಾರ್ಮ್‌ನಲ್ಲಿ ಕೆಲವೇ ಜನರು ಇದ್ದ ಕಾರಣ ಯಾರಿಗೂ ಗಾಯಗಳಾಗಿಲ್ಲ.

ಘಟನೆಯಿಂದ ಐಆರ್‌ಸಿಟಿಸಿ ನೀರು ಮಾರಾಟ ಮಳಿಗೆಗೆ ಮಾತ್ರ ಹಾನಿಯಾಗಿದೆ.

ಸರಕಾರಿ ರೈಲ್ವೇ ಪೊಲೀಸ್ (ಜಿಆರ್ ಪಿ) ಪ್ರಕಾರ, ರೈಲಿನಲ್ಲಿ ವಿದ್ಯುತ್ ಅಡಚಣೆಯಿಂದ ಉಂಟಾದ ಬ್ರೇಕ್ ವೈಫಲ್ಯದ ಪರಿಣಾಮವಾಗಿ ಅಪಘಾತ ಸಂಭವಿಸಿದೆ. ಸಂಜೆ 4.25 ರ ಸುಮಾರಿಗೆ ಲೋಕೋ ಪೈಲಟ್ ಶಂಕರ್ ಅವರು ರೈಲನ್ನು ಸ್ಟೇಬ್ಲಿಂಗ್ ಲೈನ್‌ನಿಂದ ಪ್ಲಾಟ್‌ಫಾರ್ಮ್ ಒಂದಕ್ಕೆ ಓಡಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.

ರೈಲು ಸಂಜೆ 4.35ಕ್ಕೆ ಚೆಂಗಲ್ಪಟ್ಟಿಗೆ ಹೊರಡಬೇಕಿತ್ತು. ನಿಧಾನವಾಗಿ ಚಲಿಸುತ್ತಿದ್ದ ರೈಲು ಪ್ಲಾಟ್‌ಫಾರ್ಮ್‌ನ ಡೆಡ್-ಎಂಡ್‌ಗೆ ಸಮೀಪಿಸುತ್ತಿದ್ದಂತೆ, ಶಂಕರ್ ಹಠಾತ್ ರೈಲಿನ ನಿಯಂತ್ರಣವನ್ನು ಕಳೆದುಕೊಂಡರು ಹಾಗೂ  ಅದು ಬಫರ್‌ನಿಂದ 5 ಮೀ ಗಿಂತಲೂ ಹೆಚ್ಚು ಚಲಿಸಿ ಪ್ಲಾಟ್‌ಫಾರ್ಮ್‌ಗೆ ಅಪ್ಪಳಿಸಿತು. ಪರಿಣಾಮವಾಗಿ ಮೋಟಾರು ಕೋಚ್ (ಮೊದಲ ಕೋಚ್) ಪ್ಲಾಟ್‌ಫಾರ್ಮ್‌ಗೆ ಏರಿತು ಹಾಗೂ  ಟ್ರೈಲರ್ ಕೋಚ್ ಪ್ಲಾಟ್‌ಫಾರ್ಮ್‌ನ ಗೋಡೆಗೆ ಅಪ್ಪಳಿಸಿತು. ಶಂಕರ್ ರೈಲಿನಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News