×
Ad

ರಾಜ್ಯ ಸರಕಾರ ವಜಾಕ್ಕೆ ಆಗ್ರಹಿಸಿ ಎ.25ರಿಂದ ಮೇ 10ರವರೆಗೆ ಎಸ್ ಡಿಪಿಐಯಿಂದ ಜನಾಂದೋಲನ

Update: 2022-04-25 15:58 IST

ಮಂಗಳೂರು, ಎ.25: ಕರ್ನಾಟಕ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಒಂದಲ್ಲಾ ಒಂದು ಹಗರಣ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವನ್ನು ವಜಾ ಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಆಗ್ರಹಿಸಿ ಎಸ್ ಡಿಪಿಐ  ವತಿಯಿಂದ ಎ.25ರಿಂದ ಮೇ 10ರವರೆಗೆ ಜನಾಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿಕೊಂಡು ದಾಳಿಗಳು ನಡೆಯುತ್ತಿವೆ. ಇದರ ವಿರುದ್ಧ ಸರ್ಕಾರದಿಂದ ಯಾವುದೇ ಕ್ರಮ ಜರುಗುತ್ತಿಲ್ಲ. ಬಿಜೆಪಿ ಮುಖಂಡರಾದ ಎಚ್.ವಿಶ್ವನಾಥ್, ಬಸನ ಗೌಡ ಪಾಟೀಲ್ ಯತ್ನಾಳ್ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಹೇಳಿಕೆ ನೀಡಿ ಮೇಲ್ದಂಡೆ ಯೋಜನೆಯಲ್ಲಿ ಮಾಜಿ ಮುಖ್ಯಮಂತ್ರಿಯ ಪುತ್ರ 20 ಸಾವಿರ ಕೋಟಿ ರೂ. ಕಮಿಷನ್ ಪಡೆದಿದ್ದಾರೆ ಎಂದು ಆರೋಪಿಸಿದ್ದರು, ಬಳಿಕ ಶಶಿಕಲಾ ಜೊಲ್ಲೆಯವರ ಮೊಟ್ಟೆ ಹಗರಣ, ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಪ್ರಧಾನಿಗೆ ಬರೆದ ಪತ್ರದಲ್ಲಿ ಕಾಮಗಾರಿ ಟೆಂಡರ್ ಮಂಜೂರಾತಿಗೆ ಮೊದಲು ಶೇ.5 ಕಮೀಷನ್ ಶಾಶಕರಿಗೆ ನೀಡಲು ಕಿರುಕುಳ ನೀಡಲಾಗುತ್ತಿದೆ. ಬಳಿಕ ಶೇ.40 ಕಮೀಷನ್ ಟೆಂಡರ್ ಪಡೆದ ಬಳಿಕ ನೀಡಬೆಕಾಗಿದೆ ಎಂದು ಆರೋಪಿಸಿದ್ದಾರೆ. ಇದೀಗ ಪಿಎಸ್ಸೈ ನೇಮಕಾತಿಗೆ ಸಂಬಂಧಿಸಿ ಲಂಚ ಪಡೆದಿರುವ ಆರೋಪ ಸರಕಾರದ ಮೇಲಿದೆ. ಅಲ್ಪಸಂಖ್ಯಾತರ ಸಬಲೀಕರಣ ಯೋಜನೆಯ ಅನುದಾನವನ್ನು ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಕಡಿತಗೊಳಿಸಿದೆ. ಈ ಎಲ್ಲ ಕಾರಣಗಳಿಗಾಗಿ ರಾಜ್ಯ ಸರಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಜನಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಮಜೀದ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ರಿಯಾಝ್ ಕಡಂಬು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News