ಮಂಗಳೂರು: ‘ಸುಗ್ರಾಮ ಸಮಾವೇಶ- 2022’ ಉದ್ಘಾಟನೆ
ಮಂಗಳೂರು, ಎ.25: ಜನ ಶಿಕ್ಷಣ ಟ್ರಸ್ಟ್, ದಕ್ಷಿಣ ಕನ್ನಡ ಜಿ.ಪಂ., ಹಂಗರ್ ಪ್ರಾಜೆಕ್ಟ್, ಎಪಿಇಐ ಸಹಯೋಗದಲ್ಲಿ ‘ಜಾಗೃತ ನಾರಿ- ಪ್ರಗತಿಗೆ ದಾರಿ’ ಧ್ಯೇಯವಾಕ್ಯದೊಂದಿಗೆ ನಗರದ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ಬಂಟ್ವಾಳ, ಉಳ್ಳಾಲ, ಪುತ್ತೂರು ಮತ್ತು ಕಡಬ ತಾಲೂಕು ಸುಗ್ರಾಮ- ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಸದಸ್ಯರ ಜಿಲ್ಲಾ ಮಟ್ಟದ ‘ಸುಗ್ರಾಮ ಸಮಾವೇಶ- 2022’ ವನ್ನು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಕ್ಷೇತ್ರದ ಅಭಿವೃದ್ಧಿ ಚಟುವಟಿಕೆಗಳ ಜೊತೆಗೆ ಇತರ ಸಾಮಾಜಿಕ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸಬೇಕು ಎಂದು ಹೇಳಿದರು.
ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದಿಂದ ಆಗಮಿಸಿದ ವಲಸೆ ಕಾರ್ಮಿಕರ ಗಣನೀಯ ಸಂಖ್ಯೆಯ ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಮುಟ್ಟಿಗೆ ಸಂಬಂಧಿಸಿದ ಸಮಸ್ಯೆಯಿಂದ ಶೇ.50 ಅಧಿಕ ಸಂಖ್ಯೆಯ ಮಹಿಳೆಯರು ಬಳಲುತ್ತಿದ್ದಾರೆ. ಇದೇ ಕಾರಣದಿಂದ ಅನೇಕ ಮಕ್ಕಳು ಕಲಿಕೆಯಿಂದ ಹಿಂದುಳಿದಿದ್ದಾರೆ. ಅಧಿಕ ರಕ್ತಸ್ರಾವದಿಂದ ಅನೇಕ ಹೆಣ್ಣುಮಕ್ಕಳು ತೊಂದರೆಗೆ ಒಳಗಾಗಿದ್ದಾರೆ ಎನ್ನುವುದನ್ನು ವೈದ್ಯನಾಗಿ ನಾನು ಅರ್ಥಮಾಡಿಕೊಳ್ಳಬಲ್ಲೆ. ಮುಟ್ಟಿನಂತಹ ಸಮಸ್ಯೆಗಳ ಬಗ್ಗೆ ಕೂಡ ಮಹಿಳೆಯರು ಮುಜುಗರವಿಲ್ಲದೆ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಬೇಕು. ಹೆಣ್ಣುಮಕ್ಕಳಲ್ಲೂ ಜಾಗೃತಿ ಮೂಡಿಸಬೇಕೆಂದು ಅವರು ಹೇಳಿದರು.
ಸಮಾಜದ ಜ್ವಲಂತ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರಂತರ ತೊಡಗಿಸಿಕೊಂಡಿರುವ ಜನಶಿಕ್ಷಣ ಟ್ರಸ್ಟ್‌ನ ಕೊಡುಗೆ ಅಭಿನಂದನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಇಮ್ಮಡಿಗೊಳಿಸಲು ಮತ್ತು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗೌರವಧನ ಹೆಚ್ಚಳ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ವಿಶೇಷ ಆಹ್ವಾನಿತ ವಿಧಾನಸಭೆ ವಿರೋಧಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದರು.
ಮುಖ್ಯ ಅತಿಥಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೇ.50 ಮಹಿಳಾ ಮೀಸಲಾತಿಯಿಂದ ಇಡೀ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯ ಪರ್ವಕಾಲ ಎದುರಾಗಿದೆ. ಗ್ರಾಮಸಭೆಗಳು ಕಾಟಾಚಾರಕ್ಕೆ ನಡೆಯದೆ ಅರ್ಥಪೂರ್ಣ ಚರ್ಚೆಗೆ ಅವಕಾಶ ನೀಡಬೇಕು ಎಂದರು.
ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕರಾದ ಶೀನಶೆಟ್ಟಿ ಮತ್ತು ಕೃಷ್ಣ ಮೂಲ್ಯ ಸಂವಾದ ಕಾರ್ಯಕ್ರಮ ಮುನ್ನಡೆಸಿದರು. ಟ್ರಸ್ಟ್‌ನ ಚೇತನ್ ಕಾರ್ಯಕ್ರಮ ನಿರ್ವಹಿಸಿದರು. ಸುಗ್ರಾಮ ಮುಖಂಡರಾದ ಶಕೀಲ, ಮಾಲತಿ ಉಪಸ್ಥಿತರಿದ್ದರು.
ಮಾದರಿ ಗ್ರಾಮ ನಿರ್ಮಾಣ ಸಂಕಲ್ಪ
ಮಹಿಳಾ ಸಬಲೀಕರಣ, ಲಿಂಗ ಸಮಾನತೆ, ಸಾಮಾಜಿಕ ನ್ಯಾಯ, ಗ್ರಾಮ ಪಂಚಾಯಿತಿ/ ಗ್ರಾಮ ಸಭೆಗಳ ಬಲವರ್ಧನೆ, ಸ್ವಚ್ಛ, ಕಸಮುಕ್ತ ಗ್ರಾಮ, ಸುಸ್ಥಿರ ಅಭಿವೃದ್ಧಿ ಕುರಿತು ‘ಸುಗ್ರಾಮ’ ಗ್ರಾಪಂ ಚುನಾಯಿತ ಮಹಿಳಾ ಸದಸ್ಯರು ಸಂಕಲ್ಪ ಕೈಗೊಂಡರು.