ಆರೋಪಿಯನ್ನು ಬಂಧಿಸಲು ಬಂದ ಪೊಲೀಸರಿಗೆ ಥಳಿಸಿದ ಗ್ರಾಮಸ್ಥರು: 20 ಮಂದಿಯ ವಿರುದ್ಧ ಪ್ರಕರಣ ದಾಖಲು
Update: 2022-04-25 21:24 IST
ಭೋಪಾಲ್: ಮಧ್ಯಪ್ರದೇಶದ ತಿಕಾಂಘರ್ ಜಿಲ್ಲೆಯ ಮೌ ಕಡ್ವಾಹ ಗ್ರಾಮದಲ್ಲಿ ಪೊಲೀಸ್ ತಂಡವೊಂದರ ಮೇಲೆ ದಾಳಿ ನಡೆಸಿದ ಗ್ರಾಮಸ್ಥರ ಒಂದು ಗುಂಪು ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿಯೊಬ್ಬನನ್ನು ಪೊಲೀಸ್ ಕಸ್ಟಡಿಯಿಂದ ಮುಕ್ತಗೊಳಿಸಿದ ಘಟನೆ ರವಿವಾರ ನಡೆದಿದೆ. ಈ ದಾಳಿಯಲ್ಲಿ ಐದು ಮಂದಿ ಪೊಲೀಸ್ ಸಿಬ್ಬಂದಿಗೆ ಗಾಯಗಳುಂಟಾಗಿವೆ, ಎರಡು ಪೊಲೀಸ್ ವಾಹನಗಳ ಕಿಟಿಕಿ ಗಾಜುಗಳೂ ದಾಳಿ ವೇಳೆ ಹಾನಿಗೊಂಡಿವೆ.
ಮೂರು ವರ್ಷ ಹಳೆಯದಾದ ಅಕ್ರಮ ಮದ್ಯ ಮಾರಾಟ ಪ್ರಕರಣವೊಂದರ ಆರೋಪಿ ರಾಮಪಾಲ್ ಎಂಬಾತನನ್ನು ಬಂಧಿಸಲು ಗ್ರಾಮಕ್ಕೆ 12 ಮಂದಿಯ ಪೊಲೀಸ್ ತಂಡ ತೆರಳಿದಾಗ ಮಹಿಳೆಯರೂ ಸೇರಿದಂತೆ 20 ಜನರ ಗುಂಪೊಂದು ಅವರ ಮೇಲೆ ಕಲ್ಲು ಕೋಲುಗಳಿಂದ ದಾಳಿ ನಡೆಸಿ ಆರೋಪಿಯನ್ನು ಬಂಧಿಸದಂತೆ ತಡೆದಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ಸುಮಾರು 20 ಜನರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‍ಗಳನ್ವಯ ಪ್ರಕರಣ ದಾಖಲಿಸಲಾಗಿದ್ದು ಅವರ ಶೋಧ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.