×
Ad

44 ಶತಕೋಟಿ ಡಾಲರ್ ಗೆ ಟ್ವಿಟ್ಟರ್ ಖರೀದಿಸಿದ ಎಲಾನ್ ಮಸ್ಕ್

Update: 2022-04-26 07:18 IST

ನ್ಯೂಯಾರ್ಕ್: ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎನಿಸಿದ ಎಲಾನ್ ಮಸ್ಕ್ ಅವರು 44 ಶತಕೋಟಿ ಡಾಲರ್ ಮೊತ್ತಕ್ಕೆ ಟ್ವಿಟ್ಟರ್ ಖರೀದಿಸಲು ಒಪ್ಪಿಕೊಂಡಿದ್ದು, ವಾಕ್ ಸ್ವಾತಂತ್ರ್ಯ ಮತ್ತು ಚರ್ಚೆಗಳ ತಾಣವಾಗಿದ್ದ ಅತ್ಯಂತ ಪ್ರಭಾವಿ ಪಬ್ಲಿಕ್ ಜಾಲತಾಣ ಕಂಪನಿ ಇನ್ನು ಖಾಸಗಿ ಕಂಪನಿಯಾಗಲಿದೆ.

ಹದಿನಾರು ವರ್ಷ ಹಳೆಯ ಟ್ವಿಟ್ಟರ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತದ ವಹಿವಾಟು ಇದು ಎನ್ನಲಾಗಿದೆ.

ಹೂಡಿಕೆದಾರರು ತಾವು ಹೊಂದಿರುವ ಪ್ರತಿಯೊಂದು ಟ್ವಿಟ್ಟರ್ ಷೇರುಗಳಿಗೆ 54.2 ಡಾಲರ್ ಪಡೆಯಲಿದ್ದಾರೆ ಎಂದು ಕಂಪನಿ ಸೋಮವಾರ ಹೇಳಿಕೆ ನೀಡಿದೆ. ಈ ಮೊತ್ತ ಕಂಪನಿಯ ದೊಡ್ಡ ಪ್ರಮಾಣದ ಷೇರುಗಳನ್ನು ಖರೀದಿಸುತ್ತಿರುವುದಾಗಿ ಮಸ್ಕ್ ಪ್ರಕಟಿಸುವ ಮುನ್ನಾದಿನದ ವಹಿವಾಟು ಅಂತ್ಯಕ್ಕೆ ಅಂದರೆ ಎ. 1ರಂದು ಇದ್ದ ಷೇರು ಬೆಲೆಯ ಶೇಕಡ 38ರಷ್ಟು ಅಧಿಕ.

ಆ ಬಳಿಕ ಟ್ವಿಟ್ಟರ್ ಷೇರುಗಳು ಸುದ್ದಿಯಲ್ಲಿದ್ದವು. "ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಯ ತಳಪಾಯ. ಟ್ವಿಟ್ಟರ್ ಡಿಜಿಟಲ್ ಟೌನ್‍ಸ್ಕ್ವೇರ್ ಆಗಿದ್ದು, ಮನುಕುಲದ ಭವಿಷ್ಯದ ಪ್ರಮುಖ ವಿಚಾರಗಳು ಇಲ್ಲಿ ಚರ್ಚೆಗೊಳ್ಳಲಿವೆ" ಎಂದು ಮಸ್ಕ್ ಹೇಳಿಕೆ ನೀಡಿದ್ದಾರೆ.

"ಟ್ವಿಟ್ಟರ್ ಅದ್ಭುತ ಶಕ್ತಿ ಹೊಂದಿದ್ದು, ಕಂಪನಿಗಾಗಿ ಮತ್ತು ಸಮುದಾಯಕ್ಕಾಗಿ ಕಾರ್ಯ ನಿರ್ವಹಿಸುವ ಮೂಲಕ ಬಳಕೆದಾರರು ಅದನ್ನು ಅನಾವರಣಗೊಳಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ" ಎಂದು ಸಿಇಒ ಪರಾಗ್ ಅಗರ್‍ವಾಲ್ ಟ್ವೀಟ್ ಮಾಡಿದ್ದಾರೆ.

ಸಂಪೂರ್ಣ ನಗದು ರೂಪದ ಈ ವ್ಯವಹಾರ ಈ ವರ್ಷದ ಕೊನೆಗೆ ಪೂರ್ಣಗೊಳ್ಳಲಿದೆ. ಮಸ್ಕ್ ಅವರು 25.5 ಶತಕೋಟಿ ಡಾಲರ್ ಮೊತ್ತವನ್ನು ಸಾಲ ಮತ್ತು ಮಾರ್ಜಿನ್ ಸಾಲದ ರೂಪದಲ್ಲಿ ಮತ್ತು 21 ಶತಕೋಟಿ ಡಾಲರ್ ಮೊತ್ತವನ್ನು ಈಕ್ವಿಟಿ ರೂಪದಲ್ಲಿ ನೀಡಲಿದ್ದಾರೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News