ಎಲಾನ್ ಮಸ್ಕ್ ವಜಾ ಮಾಡಿದರೆ ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ಗೆ ಸಿಗಲಿದೆ ಈ ಭಾರೀ ಮೊತ್ತ!

Update: 2022-04-26 02:08 GMT
ಪರಾಗ್ ಅಗರ್ವಾಲ್

ನ್ಯೂಯಾರ್ಕ್: ಬಹು ಕೋಟ್ಯಧಿಪತಿ ಎಲಾನ್ ಮಸ್ಕ್ ಅವರು ಖರೀದಿಸಿದ ಸಾಮಾಜಿಕ ಜಾಲತಾಣ ಕಂಪನಿ "ಟ್ವಿಟ್ಟರ್"ನ ಸಿಇಒ ಪರಾಗ್ ಅಗರ್ವಾಲ್ ಅವರನ್ನು ಒಂದು ವರ್ಷದ ಒಳಗಾಗಿ ಹುದ್ದೆಯಿಂದ ವಜಾಗೊಳಿಸಿದಲ್ಲಿ ಪರಾಗ್ ಅಗರ್ವಾಲ್ ಅವರು ಅಂದಾಜು 42 ದಶಲಕ್ಷ ಡಾಲರ್ ಮೊತ್ತವನ್ನು ಪಡೆಯಲಿದ್ದಾರೆ ಎಂದು ಈಕ್ವಿಲಾರ್ ಸಂಶೋಧನಾ ಸಂಸ್ಥೆ ಅಂದಾಜಿಸಿದೆ.

ಸೋಮವಾರ ಎಲಾನ್ ಮಸ್ಕ್ ಅವರು 44 ಶತಕೋಟಿ ಡಾಲರ್ ಮೊತ್ತಕ್ಕೆ ಟ್ವಿಟ್ಟರ್ ಖರೀದಿಸುವ ಒಪ್ಪಂದ ಮಾಡಿಕೊಂಡಿದ್ದು, 2013ರಿಂದ ಇದು ಪಬ್ಲಿಕ್ ಕಂಪನಿಯಾಗಿತ್ತು. ‌ಎಪ್ರಿಲ್ 14ರಂದು ಮಸ್ಕ್ ಸಲ್ಲಿಸಿದ ಸೆಕ್ಯುರಿಟೀಸ್ ಫೈಲಿಂಗ್‍ನಲ್ಲಿ, "ಟ್ವಿಟ್ಟರ್ ಆಡಳಿತ ಮಂಡಳಿ ಬಗ್ಗೆ ನನಗೆ ವಿಶ್ವಾಸ ಇಲ್ಲ" ಎಂದು ಸ್ಪಷ್ಟಪಡಿಸಿದ್ದರು.

ಪರಾಗ್ ಅಗರ್ವಾಲ್ ಅವರ ಮೂಲವೇತನ ಮತ್ತು ಎಲ್ಲ ಈಕ್ವಿಟಿ ಅವಾರ್ಡ್‍ಗಳನ್ನು ಪಡೆದುಕೊಳ್ಳುವುದು ಈಕ್ವಿಲಾರ್ ಅಂದಾಜಿನಲ್ಲಿ ಸೇರಿದೆ. ಮಸ್ಕ್ ಅವರ ಆಫರಿಂಗ್ ಬೆಲೆ ಪ್ರತಿ ಷೇರಿಗೆ 54.20 ಡಾಲರ್ ಆಗಿರುವ ಆಧಾರದಲ್ಲಿ ಪರಾಗ್ ಅಗರ್ವಾಲ್ ಒಟ್ಟು 42 ದಶಲಕ್ಷ ಡಾಲರ್ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಈ ಮುನ್ನ ಪರಾಗ್, ಟ್ವಿಟ್ಟರ್‍ನ ತಂತ್ರಜ್ಞಾನ ಅಧಿಕಾರಿಯಾಗಿದ್ದರು. ಕಳೆದ ನವೆಂಬರ್ ನಲ್ಲಿ ಇವರನ್ನು ಸಿಇಒ ಆಗಿ ನೇಮಿಸಲಾಗಿತ್ತು. 2021ರಲ್ಲಿ ಅವರ ಒಟ್ಟು ವೇತನಗಳಿಕೆ 30.4 ದಶಲಕ್ಷ ಡಾಲರ್ ಆಗಿತ್ತು ಎಂದು ತಿಳಿದುಬಂದಿದೆ. ಇದರಲ್ಲಿ ಬಹುದೊಡ್ಡ ಪಾಲು ಷೇರು ಉಡುಗೊರೆಗಳಿಂದ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News