ಉತ್ತರಪ್ರದೇಶ: ದಾರಿಯಲ್ಲಿ ಸಿಕ್ಕ 5 ಲಕ್ಷ ರೂ. ಹಣವನ್ನು ಮಾಲಕರಿಗೆ ಹಿಂದಿರುಗಿಸಿದ ಬಾಲಕ ಅಬ್ದುಲ್ ಹನಾನ್

Update: 2022-04-26 08:47 GMT
Photo: Twitter

ಬರೇಲಿ: ಬೈಕ್ ಮೆಕ್ಯಾನಿಕ್ ಒಬ್ಬರ 10 ವರ್ಷದ ಮಗ ತನಗೆ ದಾರಿಯಲ್ಲಿ ಸಿಕ್ಕ ಐದು ಲಕ್ಷ ನಗದನ್ನು ಅದರ ಮಾಲಿಕರಿಗೆ ತಲುಪಿಸಿ ವ್ಯಾಪಕ ಮೆಚ್ಚುಗೆ ಪಡೆದಿದ್ದಾನೆ. ಕಳೆದ ಬುಧವಾರ ಅಬ್ದುಲ್ ಹನ್ನಾನ್ ಬುಧವಾರ ಮನೆಗೆ ಮೊಟ್ಟೆ ಖರೀದಿಸಿ ಹಿಂದಿರುಗುತ್ತಿದ್ದಾಗ ಆಟೋ ರಿಕ್ಷಾದಿಂದ ಒಂದು ಬ್ಯಾಗ್‌ ಬೀಳುವುವುದನ್ನು ಕಂಡಿದ್ದಾನೆ. ಬ್ಯಾಗ್ ಎತ್ತಿಕೊಂಡು ಆಟೋವನ್ನು ಹಿಂಬಾಲಿಸಿ ನಿಲ್ಲಿಸಿ ಎಂದು ಜೋರಾಗಿ ಕೂಗಿದರೂ ಆಟೋ ನಿಂತಿರಲಿಲ್ಲ. ಕುತೂಹಲಗೊಂಡ ಹನ್ನಾನ್‌ ಬ್ಯಾಗ್‌ ತೆರದು ನೋಡಿದರೆ, ಅದರೊಳಗೆ ಇದ್ದದ್ದು ಬರೋಬ್ಬರಿ ಐದು ಲಕ್ಷ ರೂ. ನಗದು.  ಮನೆಗೆ ಮರಳಿದವನೇ ಹಣದ ಬ್ಯಾಗ್‌ ಅನ್ನು ತನ್ನ ತಾಯಿ ತರನ್ನುಮ್ ಗೆ ಕೊಟ್ಟಿದ್ದಾನೆ. ಬಳಿಕ ಇಬ್ಬರೂ ಕೂಡಾ ಬ್ಯಾಗ್‌ ದೊರೆತ ಸ್ಥಳಕ್ಕೇ ಹೋಗಿದ್ದು, ಅದರ ಮಾಲೀಕರು ಹುಡುಕಿ ಬರುವವರೆಗೂ ಅಲ್ಲೇ ಕಾದು ನಿಂತಿದ್ದಾರೆ.   

ಕೆಲವೇ ಸಮಯದ ನಂತರ, ಕಟ್ಟಡದ ಗುತ್ತಿಗೆದಾರನೊಬ್ಬರಿಗೆ ಸೇರಿದ ಬ್ಯಾಗ್ ಕಾಣೆಯಾದ ಬಗ್ಗೆ ಸ್ಥಳೀಯ ಮಸೀದಿಯ ಮೂಲಕ ಲೌಡ್‌ ಸ್ಪೀಕರ್‌ ನಲ್ಲಿ ಪ್ರಕಟಣೆ ಹೊರಡಿಸಲಾಯಿತು. ಈ ಪ್ರಕಟಣೆಯ ಹತ್ತೇ ನಿಮಿಷಗಳಲ್ಲಿ, ಬ್ಯಾಗ್ ಅದರ ನಿಜವಾದ ಮಾಲೀಕರಿಗೆ ತಲುಪಿದೆ ಎಂದು timesofIndia.com ವರದಿ ಮಾಡಿದೆ.

"ಬೇರೊಬ್ಬರ ಹಣವನ್ನು ಇಟ್ಟುಕೊಳ್ಳುವುದು ತಪ್ಪು ಎಂದು ನನ್ನ ಪೋಷಕರು ಮತ್ತು ಶಿಕ್ಷಕರು ನನಗೆ ಯಾವಾಗಲೂ ಕಲಿಸುತ್ತಿದ್ದರು. ಹಾಗಾಗಿ, ನಾನು ಅದನ್ನು ಹಿಂದಿರುಗಿಸಬೇಕೆಂದು ನನಗೆ ತಿಳಿದಿತ್ತು" ಎಂದು ಬಾಲಕ ಹನ್ನಾನ್ ಹೇಳಿದ್ದಾರೆ. ಹನ್ನಾನ್ ಕುಟುಂಬವು ಕೋವಿಡ್ ಸಾಂಕ್ರಾಮಿಕದ ಬಳಿಕ ಆರ್ಥಿಕ ತೊಂದರೆಗಳಿಂದ ಬಳಲುತ್ತಿದ್ದರೂ ಇನ್ನೊಬ್ಬರ ದುಡ್ಡನ್ನು ಇಟ್ಟುಕೊಳ್ಳಲು ಯೋಚಿಸಿರಲಿಲ್ಲ.

ಬ್ಯಾಗ್‌ ದೊರೆತ ಬಗ್ಗೆ ಟೈಮ್ಸ್‌ ಆಫ್‌ ಇಂಡಿಯಾದೊಂದಿಗೆ ಮಾತನಾಡಿದ ಗುತ್ತಿಗೆದಾರ ಫಿರಸತ್ ಹೈದರ್ ಖಾನ್ “ನಾನು ನಿರ್ಮಾಣ ಗುತ್ತಿಗೆದಾರ. ನಾನು ನನ್ನ ಹಣವನ್ನು ಕಳೆದುಕೊಂಡ ದಿನ, ನಾನು ಗ್ರಾಹಕರಿಂದ ಪಾವತಿಯನ್ನು ಸಂಗ್ರಹಿಸಿ ನನ್ನ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದೆ. ರಸ್ತೆ ಬ್ಲಾಕ್ ಆಗಿರುವುದನ್ನು ಕಂಡು ನಾನು ನನ್ನ ಕಾರನ್ನು ನಿಲ್ಲಿಸಿ ಆಟೋ ಹಿಡಿಯಲು ನಿರ್ಧರಿಸಿದೆ. ನನ್ನ ಬಳಿ ಎರಡು ಚೀಲಗಳಿದ್ದವು -- ಒಂದರಲ್ಲಿ ಹಣ ಮತ್ತು ಇನ್ನೊಂದರಲ್ಲಿ ಬಟ್ಟೆ ಇತ್ತು. ಆಟೋದಿಂದ ಹಣದ ಚೀಲ ಬಿದ್ದಿದೆ. ಬ್ಯಾಗ್ ಕಳೆದುಕೊಂಡಿರುವುದು ನನ್ನ ಗಮನಕ್ಕೆ ಬಂದಾಗ ಆಟೋದಿಂದ ಇಳಿದು ಅದನ್ನು ಹುಡುಕಲು ಪ್ರಾರಂಭಿಸಿದೆ, ಆದರೆ ವ್ಯರ್ಥವಾಯಿತು. ನಂತರ, ನಾನು ಆ ಪ್ರದೇಶದಲ್ಲಿ ಮಸೀದಿಯನ್ನು ನೋಡಿದೆ, ಮಸೀದಿ ಧ್ವನಿವರ್ಧಕಗಳಲ್ಲಿ ಬಯಾಗ್‌ ಕಳೆದುಕೊಂಡದ್ದರ ಬಗ್ಗೆ ಘೋಷಣೆ ಮಾಡಲು ಅಲ್ಲಿನ ಉಸ್ತುವಾರಿಯನ್ನು ವಿನಂತಿಸಿದೆ.”

“ನನ್ನ ಹಣವನ್ನು ಮರಳಿ ಪಡೆಯುವ ಎಲ್ಲಾ ಭರವಸೆಗಳನ್ನು ನಾನು ಕಳೆದುಕೊಂಡಿರುವಾಗ, ಹನ್ನನ್ ಅಲ್ಲಾಹನ ಮಲಕ್‌ ರೂಪದಲ್ಲಿ ಕಾಣಿಸಿಕೊಂಡು ನನ್ನ ಚೀಲವನ್ನು ಹಿಂದಿರುಗಿಸಿದನು. ಹನ್ನಾನ್ ಮತ್ತು ಅವರ ತಾಯಿಗೆ ನಾನು ಅಪಾರ ಕೃತಜ್ಞನಾಗಿದ್ದೇನೆ” ಎಂದು ಹೈದರ್ ಖಾನ್ ಹೇಳಿದ್ದಾರೆ.

"ನಾನು ಯಾವಾಗಲೂ ನನ್ನ ಮಗುವಿಗೆ ದಯೆ ಮತ್ತು ಸದಾಚಾರದ ಮಾರ್ಗವನ್ನು ಅನುಸರಿಸಲು ಕಲಿಸುತ್ತೇನೆ." ಎಂದು ಹನ್ನಾನ್‌ ತಾಯಿ ಹೇಳಿದ್ದಾರೆ.

 “ಶಾಲೆಯಲ್ಲಿ ಕಲಿಸುವದನ್ನು ಅನುಸರಿಸುವ ಮೂಲಕ ಹನ್ನನ್ ನಮಗೆ ಹೆಮ್ಮೆ ತಂದಿದ್ದಾರೆ. ಅವರ ಪ್ರಾಮಾಣಿಕತೆಗೆ ಪ್ರತಿಫಲವಾಗಿ ಶಾಲೆಯ ಆಡಳಿತ ಮಂಡಳಿಯು ಒಂದು ವರ್ಷದ ಶುಲ್ಕವನ್ನು ಮನ್ನಾ ಮಾಡಿದೆ.” ಎಂದು ಹನ್ನಾನ್ ಅಧ್ಯಯನ ಮಾಡುವ ಸಾಬ್ರಿ ಶಾಲೆಯ ಮ್ಯಾನೇಜರ್ ಸಾಜಿದ್ ಖಾನ್ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದ್ದಾರೆ.

ಪ್ರಮುಖ ಇಸ್ಲಾಮಿಕ್ ಸಂಘಟನೆಯಾದ ಜಮಾತ್ ರಜಾ-ಇ-ಮುಸ್ತಫಾದ ಉಪಾಧ್ಯಕ್ಷ ಸಲ್ಮಾನ್ ಹಸನ್ ಖಾನ್, ಹನ್ನಾನ್ ಅವರನ್ನು ಸನ್ಮಾನಿಸಲಾಗುವುದು ಎಂದು ಘೋಷಿಸಿದ್ದಾರೆ, "ಹನ್ನಾನ್ ನಿಜವಾದ ಇಸ್ಲಾಮಿಕ್ ಪಾತ್ರವನ್ನು ಪ್ರದರ್ಶಿಸಿದ್ದಾರೆ." ಎಂದು ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News