ರಾಜಕೀಯ ಪ್ರೇರಿತ ಮನಸ್ಸುಗಳು ಸಮಾಜದ ಶಾಂತಿಯನ್ನು ಕದಡುತ್ತಿವೆ: ಸತೀಶ್ ಕುಮಾರ್
ಭಟ್ಕಳ: ಕೊರೋನ ಈ ಜಗತ್ತಿಗೆ ಒಂದು ದೊಡ್ಡ ಪಾಠವನ್ನು ಬಿಟ್ಟುಹೋಗಿದ್ದು ಇದರಿಂದ ಮಾನವೀಯತೆಯ ಪಾಠ ಕಲಿಯದ ನಾವು ಸಮಾಜದಲ್ಲಿ ಅಶಾಂತಿಯನ್ನು ಹರಡುವಲ್ಲಿ ಸಕ್ರೀಯರಾಗಿದ್ದೇವೆ. ರಾಜಕೀಯ ಪ್ರೇರಿತ ಮನಸ್ಸುಗಳೇ ದೇಶ ಒಡೆಯುವ ಕಾಯಕದಲ್ಲಿ ನಿರತರಾಗಿದ್ದಾರೆ ಎಂದು ಸದ್ಭಾವನಾ ಮಂಚ್ ಅಧ್ಯಕ್ಷ ಸಾಮಾಜಿಕ ಕಾರ್ಯಕರ್ತ ಸತೀಶ್ ಕುಮಾರ ಹೇಳಿದರು.
ಅವರು ರವಿವಾರ ಸಂಜೆ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹುರುಳಿಸಾಲ್ ನಲ್ಲಿರುವ ಆಹ್ಮದ್ ಸಯೀದ್ ಜಾಮಿಯಾ ಮಸೀದಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಆಯೋಜಿಸಿದ್ದ ಇಫ್ತಾರ್ ಸೌಹಾರ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇನ್ನೂ ಮುಂದಿನ ವರ್ಷದವರೆಗೆ ಇಂದಿನ ಸ್ಥಿತಿಯೆ ಮುಂದುವರೆಯಲಿದ್ದು ರಾಜಕೀಯ ಕುತಂತ್ರಿಗಳು ತಮ್ಮ ಲಾಭಕ್ಕೋಸ್ಕರ ಸಮಾಜದಲ್ಲಿ ಗಲಭೆ, ಅಶಾಂತಿಯನ್ನು ಸೃಷ್ಟಿಸುತ್ತಾರೆ ಎಂದು ಹೇಳಿದ ಅವರು ಇಂತಹ ಕುತಂತ್ರಿಗಳಿಗೆ ಯಾವುದೇ ಮಣೆಹಾಕದೆ ಅಂತಹ ದುಷ್ಟಶಕ್ತಿಗಳ ಹೆಡೆಮುರಿಕಟ್ಟಬೇಕೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಡಿ.ನಾಯ್ಕ, ವೀರಾಂಜನೆಯ ದೇವಸ್ಥಾನದಲ್ಲಿ ಧರ್ಮದರ್ಶಿ ಉಗ್ರಾಣಿಮನೆ ಅನಂತ್ ನಾಯ್ಕ, ಮೊಗೇರ್ ಸಮಾಜದ ಮುಖಂಡ ಎಪ್.ಕೆ.ಮೊಗೇರ್, ನಾಮಧಾರಿ ಸಮಾಜದ ಹಿರಿಯ ಮುಖಂಡ ಎಂ.ಆರ್. ನಾಯ್ಕ, ಪತ್ರಕರ್ತ ಎಂ.ಆರ್.ಮಾನ್ವಿ ಮಾತನಾಡಿದರು.
ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪಾ, ಆಹ್ಮದ್ ಸಯೀದ್ ಜಾಮಿಯಾ ಮಸೀದಿಯ ಖತೀಬ್, ಇಮಾಮ್ ಮೌಲಾನ ಮುಹಮ್ಮದ್ ಜಾಫರ್ ನದ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಟಿ.ಡಿ. ನಾಯ್ಕ, ಜನತಾ ವಿದ್ಯಾಲಯ ಶಿರಾಲಿ ಇದರ ಪ್ರಾಂಶುಪಾಲ ಎ.ಬಿ.ರಾಮರಥ್, ಅಂಜುಮನ್ ಕಾಲೇಜಿನ ಪ್ರೊ.ಗಣೇಶ್ ಯಾಜಿ, ಆರ್.ಎನ್.ಎಸ್. ರೂರಲ್ ಪಾಲಿಟೆಕ್ನಿಕ್ಸ್ ನ ಉಪಪ್ರಾಂಶುಪಾಲ ಕೆ.ಮರಿಸ್ವಾಮಿ ಸದ್ಭಾವನಾ ಮಂಚ್ ಉಪಾಧ್ಯಕ್ಷ ಪಾಸ್ಕಲ್ ಗೂಮ್ಸ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.