ಇಸ್ರೇಲ್ ಪಡೆಯ ದಾಳಿಯಲ್ಲಿ ಪೆಲೆಸ್ತೀನ್ ಯುವಕನ ಮೃತ್ಯು

Update: 2022-04-26 17:47 GMT

ಜೆರುಸಲೇಂ, ಎ.26: ಆಕ್ರಮಿತ ಪಶ್ಚಿಮ ದಂಡೆಯ ಜೆರಿಚೊ ನಗರದಲ್ಲಿರುವ ಅಖಬೆಟ್ ಜಬೆರ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಪಡೆ ನಡೆಸಿದ ದಾಳಿಯಲ್ಲಿ ಓರ್ವ ಪೆಲೆಸ್ತೀನ್ ಪ್ರಜೆ ಮೃತಪಟ್ಟಿರುವುದಾಗಿ ಪೆಲೆಸ್ತೀನ್ನ ಆರೋಗ್ಯ ಇಲಾಖೆ ಹೇಳಿದೆ.

   ಮಂಗಳವಾರ ಬೆಳಿಗ್ಗೆ ನಡೆಸಿದ ಕಾರ್ಯಾಚರಣೆ ಸಂದರ್ಭ ಇಸ್ರೇಲ್ ಪಡೆ 20 ವರ್ಷದ ಅಹ್ಮದ್ ಇಬ್ರಾಹಿಂ ಖ್ವೈದತ್ ನ ತಲೆಗೆ ಗುಂಡಿಕ್ಕಿದೆ. ತೀವ್ರ ಗಾಯಗೊಂಡ ಅಹ್ಮದ್ ನನ್ನು ರಮಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇಸ್ರೇಲ್ ಪಡೆಯ ಕಾರ್ಯಾಚರಣೆಯಲ್ಲಿ ಇಬ್ಬರು ಪೆಲೆಸ್ತೀನೀಯರನ್ನು ಬಂಧಿಸಲಾಗಿದೆ ಎಂದು ಇಲಾಖೆ ಹೇಳಿದೆ.

ಪೆಲೆಸ್ತೀನ್ ಪ್ರಜೆಯ ಹತ್ಯೆ ಖಂಡಿಸಿ ಜೆರಿಚೊ ಮತ್ತು ಜೋರ್ಡನ್ ಕಣಿವೆಯಲ್ಲಿ ಮಂಗಳವಾರ ಹರತಾಳಕ್ಕೆ ಕರೆ ನೀಡಲಾಗಿದೆ ಎಂದು ವರದಿಯಾಗಿದೆ. ಕಳೆದ ವಾರ ಪಶ್ಚಿಮ ದಂಡೆಯ ಜೆನಿನ್ ನಗರದಲ್ಲಿ ಇಸ್ರೇಲ್ ಸೇನೆ ನಡೆಸಿದ ಶೋಧ ಕಾರ್ಯಾಚರಣೆ ಸಂದರ್ಭ ಇಬ್ಬರು ಪೆಲೆಸ್ತೀನೀಯರು ಹತರಾಗಿದ್ದು ಜೆರುಸಲೇಂ ಮತ್ತು ಪಶ್ಚಿಮ ದಂಡೆ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿದೆ. 2022ರ ಆರಂಭದಿಂದ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಸೇನೆಯ ಕಾರ್ಯಾಚರಣೆಯಲ್ಲಿ ಕನಿಷ್ಟ 46 ಪೆಲೆಸ್ತೀನೀಯರು ಮೃತಪಟ್ಟಿದ್ದರೆ, ಈ ವರ್ಷದ ಮಾರ್ಚ್ 22ರಿಂದ ಇಸ್ರೇಲ್ನಲ್ಲಿ ಪೆಲೆಸ್ತೀನೀಯರು ನಡೆಸಿದ ದಾಳಿಯಲ್ಲಿ 14 ಮಂದಿ ಮೃತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News