ಚೆರ್ನೋಬಿಲ್ ನಲ್ಲಿ ವಿಕಿರಣ ಮಟ್ಟ ಅಸಹಜ: ವಿಶ್ವಸಂಸ್ಥೆ

Update: 2022-04-26 17:52 GMT

ಕೀವ್, ಎ.26: ಉಕ್ರೇನ್‌ನ ಚೆರ್ನೊಬಿಲ್ ಪರಮಾಣು ದುರಂತದ ಸ್ಥಳದಲ್ಲಿ ವಿಕಿರಣದ ಮಟ್ಟ ಅಸಹಜವಾಗಿದೆ. ಈ ಪ್ರದೇಶ ರಶ್ಯದ ಸ್ವಾಧೀನಕ್ಕೆ ಬಂದಿದ್ದ ಸಂಕ್ಷಿಪ್ತ ಅವಧಿ ಅತ್ಯಂತ ಅಪಾಯಕಾರಿಯಾಗಿತ್ತು ಎಂದು ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆಯ ಮುಖ್ಯಸ್ಥರು ಮಂಗಳವಾರ ಹೇಳಿದ್ದಾರೆ.

 ಚೆರ್ನೋಬಿಲ್ ಸ್ಥಾವರದ ದುರಂತದ ವಾರ್ಷಿಕ ದಿನದಂದು ಅಲ್ಲಿಗೆ ಭೇಟಿ ನೀಡಿದ ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ನಿರ್ದೇಶಕ ರಫೆಲ್ ಗ್ರಾಸಿ, ಇಲ್ಲಿ ವಿಕಿರಣ ಮಟ್ಟ ಅತ್ಯಂತ ಅಸಹಜವಾಗಿದೆ. ರಶ್ಯ ಸೇನೆ ಈ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದ ಸಂದರ್ಭ ಹಾಗೂ ಇಲ್ಲಿಂದ ತೆರಳುವ ಸಂದರ್ಭ ರಶ್ಯ ಸೇನೆಯ ಜತೆಗಿದ್ದ ಭಾರೀ ಗಾತ್ರದ ಸಾಮಾಗ್ರಿ, ವಾಹನಗಳ ಚಲನೆಯಿಂದ ವಿಕಿರಣ ಮಟ್ಟ ಹೆಚ್ಚಿದೆ. ಇಲ್ಲಿಯ ಸ್ಥಿತಿಯನ್ನು ಪ್ರತೀ ದಿನ ಗಮನಿಸಲಾಗುತ್ತಿದೆ ಎಂದು ಹೇಳಿದ್ದಾರೆ.

 ಚೆರ್ನೋಬಿಲ್ ಅಣುಸ್ಥಾವರದಲ್ಲಿ ವಿಕಿರಣ ತ್ಯಾಜ್ಯ ಸಂಗ್ರಹವನ್ನು ಕಲ್ಲಿನ ಪೆಟ್ಟಿಗೆಯಿಂದ ಮುಚ್ಚಿರುವ ಪ್ರದೇಶಕ್ಕೆ ಭೇಟಿ ನೀಡಿದ ಗ್ರಾಸಿ, ಈ ಪ್ರದೇಶ ರಶ್ಯದ ಸ್ವಾಧೀನಕ್ಕೆ ಬಂದಿದ್ದ ಸಂಕ್ಷಿಪ್ತ ಅವಧಿ ಅತ್ಯಂತ ಅಪಾಯಕಾರಿಯಾಗಿತ್ತು ಎಂದರು. ಫೆಬ್ರವರಿ 24ರಂದು ಚೆರ್ನೋಬಿಲ್ ಪ್ರದೇಶವನ್ನು ಆಕ್ರಮಿಸಿಕೊಂಡ ರಶ್ಯ ಅಲ್ಲಿದ್ದ ಉಕ್ರೇನ್ ಯೋಧರು ಹಾಗೂ ಸಿಬಂದಿಗಳನ್ನು ಬಂಧಿಸಿದ್ದರು. ಮಾರ್ಚ್ ಅಂತ್ಯದವರೆಗೆ ಚೆರ್ನೊಬಿಲ್ ಪ್ರದೇಶ ರಶ್ಯದ ವಶದಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News