ಎಲಾನ್ ಮಸ್ಕ್ ಸ್ವಾಧೀನ ವಿರೋಧಿಸಿ ಟ್ವಿಟ್ಟರ್ ನಲ್ಲಿ ಭುಗಿಲೆದ್ದ ದಂಗೆ!

Update: 2022-04-27 01:40 GMT

ವಾಷಿಂಗ್ಟನ್: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿದ ಎಲಾನ್ ಮಸ್ಕ್, ಸಾಮಾಜಿಕ ಜಾಲತಾಣ ಟ್ವಿಟ್ಟರ್ ಖರೀದಿಸಿದ ಬೆನ್ನಲ್ಲೇ ಸಂಸ್ಥೆಯಲ್ಲಿ ದಂಗೆ ಮತ್ತು ಬಂಡಾಯ ಹೊಗೆಯಾಡಲು ಆರಂಭವಾಗಿದೆ.

ಕಂಪನಿ ಬಂಡಾಯ ಎಷ್ಟು ತೀವ್ರವಾಗಿದೆ ಎಂದರೆ, ಉದ್ರಿಕ್ತ ಸಿಬ್ಬಂದಿಯಿಂದ ವಿಧ್ವಂಸಕ ಕೃತ್ಯದ ಭೀತಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಕಂಪನಿ ತನ್ನ ಡೆವಲಪರ್ ಗಳು ಆ್ಯಪ್‍ನಲ್ಲಿ ಯಾವುದೇ ಬದಲಾವಣೆ ಮಾಡದಂತೆ ಕಂಪನಿ ನಿಷೇಧಿಸಿದೆ.

ಎಲಾನ್ ಮಸ್ಕ್ ಟ್ವಿಟ್ಟರ್ ಕಂಪನಿಯನ್ನು ವಶಪಡಿಸಿಕೊಂಡಿರುವುದು ಅಪಾಯಕಾರಿ ಎಂದು ಕೋಪಗೊಂಡಿರುವ ಉದ್ಯೋಗಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. ಅಂತೆಯೇ ಮಸ್ಕ್ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದರೂ, ಒಬ್ಬ ವ್ಯಕ್ತಿಯ ಕೈಗೆ ಇಷ್ಟೊಂದು ಶಕ್ತಿ ನೀಡುವುದು ಅಪಾಯಕಾರಿ ಎಂದು ನಾಗರಿಕ ಸ್ವಾತಂತ್ರ್ಯ ಪ್ರತಿಪಾದಕ ಗುಂಪುಗಳು ಆತಂಕ ವ್ಯಕ್ತಪಡಿಸಿವೆ.

ಈ ಶಕ್ತಿಶಾಲಿ ಮಾಧ್ಯಮವನ್ನು ಎಲಾನ್ ಮಸ್ಕ್ ಖರೀದಿಸಿರುವ ಬಗ್ಗೆ ಭಿನ್ನ ವಲಯಗಳಲ್ಲಿ ಭಿನ್ನ ಬಗೆಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ. ಎಲಾನ್ ಮಸ್ಕ್ ಅವರ ಟೆಲ್ಸಾ ಚೀನಾದಲ್ಲಿ ದೊಡ್ಡ ಪ್ರಮಾಣದ ಪಾಲು ಹೊಂದಿರುವುದರಿಂದ ಟ್ವಿಟ್ಟರ್‍ನ ಮೇಲೆ ಚೀನಾ ಪ್ರಭಾವ ಹೆಚ್ಚುವ ಸಾಧ್ಯತೆ ಇದೆ ಎಂದು ಅಮೆಝಾನ್ ಸಂಸ್ಥಾಪಕ ಜೆಫ್ ಬೆಝೋಸ್ ಅಭಿಪ್ರಾಯಪಟ್ಟಿದ್ದಾರೆ.

ಉದ್ಯೋಗಿಗಳ ಅಸಮಾಧಾನ ಶಮನಕ್ಕೆ ಸೋಮವಾರ ಉದ್ಯೋಗಿ ಸಭೆಯಲ್ಲಿ ಮಾತನಾಡಿದ ಸಿಇಒ ಪರಾಗ್ ಅಗರ್‍ವಾಲ್ ಅವರು, "ಈ ಸ್ವಾಧೀನದ ಬಗ್ಗೆ ನೀವು ಭಿನ್ನ ಭಾವನೆಗಳನ್ನು ಹೊಂದಿರುವುದನ್ನು ಗುರುತಿಸಿದ್ದೇವೆ" ಎಂದು ಹೇಳಿದರು ಎನ್ನಲಾಗಿದೆ.

"ನಿಮ್ಮಲ್ಲಿ ಕೆಲವರಿಗೆ ಆತಂಕ ಇದ್ದರೆ, ಮತ್ತೆ ಕೆಲವರಿಗೆ ರೋಮಾಂಚನವಾಗಿರಬಹುದು; ಇನ್ನು ಕೆಲವರು ಮುಂದೆ ಹೇಗೆ ಎಂದು ಕಾಯುತ್ತಿರಬಹುದು. ಇದು ನಿಮಗೆ ವೈಯಕ್ತಿಕವಾಗಿ ಪರಿಣಾಮ ಬೀರುತ್ತದೆ ಎನ್ನುವ ಅರಿವು ನನಗಿದೆ. ಇದು ಭಾವನಾತ್ಮಕ ದಿನ. ಅದನ್ನು ನಾನು ಗುರುತಿಸುತ್ತೇನೆ" ಎಂದು ಸ್ಪಷ್ಟಪಡಿಸಿದರು ಎನ್ನಲಾಗಿದೆ.

ಎಲಾನ್ ಮಸ್ಕ್ ಅವರಿಗೆ ವರ್ಗಾವಣೆಯಾಗುವ ಮುಂದಿನ ಆರು ತಿಂಗಳ ಅವಧಿಯಲ್ಲಿ ಎಲ್ಲರ ಉದ್ಯೋಗ ಸುರಕ್ಷಿತ ಎಂದು ಅವರು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News