"ಎಂದೆಂದೂ ಹಿಂದಿಯೇ ನಮ್ಮ ರಾಷ್ಟ್ರ ಭಾಷೆ": ಸುದೀಪ್‌ಗೆ ಅಜಯ್‌ ದೇವಗನ್‌ ಪ್ರತಿಕ್ರಿಯೆ

Update: 2022-04-27 13:10 GMT

 ಮುಂಬೈ: ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ ಎಂದು ಇತ್ತೀಚೆಗೆ ನಟ ಸುದೀಪ್‌ ನೀಡಿದ್ದ ಹೇಳಿಕೆಗೆ ಹಿಂದಿ ನಟ ಅಜಯ್‌ ದೇವಗನ್‌ ತಿರುಗೇಟು ನೀಡಿದ್ದಾರೆ.

ಹಿಂದಿ ನಮ್ಮ ಮಾತೃಭಾಷೆ, ನಮ್ಮ ರಾಷ್ಟ್ರ ಭಾಷೆ ಎಂದು ಬರೆದಿರುವ ದೇವಗನ್‌, ಹಿಂದಿ ರಾಷ್ಟ್ರಭಾಷೆಯಲ್ಲದಿದ್ದರೆ ನಿಮ್ಮ ಸಿನೆಮಾವನ್ನು ಹಿಂದಿಯಲ್ಲೇಕೆ ಡಬ್‌ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಹಾಕಿದ್ದಾರೆ.

“ಸಹೋದರ ಸುದೀಪ್‌, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದಾದರೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಯಾಕೆ ಬಿಡುಗಡೆ ಮಾಡುತ್ತೀರಿ? ,ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರಭಾಷೆ ಆಗಿದ್ದು, ಇಂದೂ ಮತ್ತು ಎಂದೆಂದಿಗೂ ಹಾಗೆಯೇ ಇರುತ್ತದೆ.” ಎಂದು ಅಜಯ್‌ ದೇವಗನ್‌ ಟ್ವೀಟ್‌ ಮಾಡಿದ್ದಾರೆ.

ಹಿಂದಿ ಹೇರಿಕೆಯ ವಿರುದ್ಧ ಹಾಗೂ ಉತ್ತರ ಭಾರತದವರು ದಕ್ಷಿಣ ಭಾರತೀಯ ಭಾಷೆಗಳನ್ನು ಕಡೆಗಣಿಸುತ್ತಿದ್ದಾರೆ ಎಂಬ ಚರ್ಚೆಗಳು ಸದ್ಯ ನಡೆಯುತ್ತಿರುವ ನಡುವೆಯೇ ಅಜಯ್‌ ದೇವಗನ್‌ ಹಿಂದಿ ರಾಷ್ಟ್ರ ಭಾಷೆ ಎಂದು ಹೇಳಿಕೆ ನೀಡಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.

ಹಿಂದಿಗೆ ಒಂದು ಸಿನೆಮಾ ಡಬ್‌ ಆದರೆ ಹಿಂದಿ ರಾಷ್ಟ್ರ ಭಾಷೆಯಾಗುತ್ತಾ? ಎಂದು ನೆಟ್ಟಿಗರು ಪ್ರಶ್ನಿಸಿದ್ದು, ಗುಜರಾತ್‌ ನ್ಯಾಯಾಲಯ ಈ ಹಿಂದೆ ನೀಡಿದ್ದ ʼಹಿಂದಿ ರಾಷ್ಟ್ರ ಭಾಷೆ ಅಲ್ಲʼ ಎಂಬ ತೀರ್ಪನ್ನು ಅಜಯ್‌ ದೇವಗನ್‌ ಗೆ ನೆನಪಿಸಿದ್ದಾರೆ.

“ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಲ್ಲ, ಹಿಂದಿ ನನ್ನ ಮಾತೃಭಾಷೆಯಲ್ಲ. ಇದು ಕೇವಲ (ಭಾರತದ) 23 ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ.  2021 ರಲ್ಲಿ ದಕ್ಷಿಣ ಭಾರತದ ಚಲನಚಿತ್ರಗಳು ₹2,400 ಕೋಟಿ ಮತ್ತು ಬಾಲಿವುಡ್ ಕೇವಲ ₹800 ಕೋಟಿ ಗಳಿಸಿವೆ. ಬಡಾಯಿ ಕೊಚ್ಚಿಕೊಳ್ಳುವುದನ್ನು ನಿಲ್ಲಿಸಿ!” ಎಂದು ಕತ್ಯುಶಾ ಎಂಬವರು ಟ್ವೀಟ್‌ ಮಾಡಿದ್ದಾರೆ.

 ಇತ್ತೀಚೆಗೆ ತೋತಾಪುರಿ ಸಿನೆಮಾದ ಟ್ರೈಲರ್‌ ಬಿಡುಗಡೆ ಸಮಾರಂಭದಲ್ಲಿ ದಕ್ಷಿಣ ಭಾರತ ಚಿತ್ರ ನಿರ್ಮಾಪಕರು ತಮ್ಮ ಸಿನೆಮಾಗಳನ್ನು ಪ್ಯಾನ್‌ ಇಂಡಿಯಾ ಸಿನೆಮಾ ಎಂದು ಹೇಳಬೇಡಿ. ಹಿಂದಿ ಕೂಡಾ ನಮ್ಮ ಭಾಷೆಗಳಂತಡ ಒಂದು ಭಾಷೆ, ಅದು ರಾಷ್ಟ್ರ ಭಾಷೆ ಅಲ್ಲ, ಅದು ಎಂದೂ ಆಗಿರಲಿಲ್ಲ ಎಂದು ಹೇಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News