×
Ad

ಶತಾಬ್ದಿ ಎಕ್ಸ್ ಪ್ರೆಸ್‌ ನ ಪ್ರಯಾಣಿಕನಿಗೆ ಬಂದಿತು ಇಫ್ತಾರ್ ಊಟ: ಹೃದಯ ಗೆದ್ದ ಕ್ಯಾಟರಿಂಗ್ ಸಿಬ್ಬಂದಿ

Update: 2022-04-27 21:25 IST
photo courtesy:twitter/@ScribeShah

ಹೊಸದಿಲ್ಲಿ,ಎ.27: ಭಾರತದಲ್ಲಿ ಇತ್ತೀಚಿನ ಧಾರ್ಮಿಕ ಘರ್ಷಣೆಗಳ ನಡುವೆಯೇ ಹೌರಾ-ರಾಂಚಿ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನ ಸಿಬ್ಬಂದಿಗಳು ಮಂಗಳವಾರ ಪ್ರಯಾಣಿಕನೋರ್ವನಿಗೆ ಇಫ್ತಾರ್ ಊಟವನ್ನು ಪೂರೈಸಿ ಹೃದಯಗಳನ್ನು ಗೆದ್ದಿದ್ದಾರೆ.

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶಾನವಾಝ್ ಅಖ್ತರ್ ಅವರು ಇನ್ನೇನು ರಮಝಾನ್ ಉಪವಾಸವನ್ನು ಮುರಿಯಲಿದ್ದರು. ಅದೇ ವೇಳೆಗೆ ಕೇಟರಿಂಗ್ ಸಿಬ್ಬಂದಿ ಇಫ್ತಾರ್ ಊಟವನ್ನು ತಂದು ಅಖ್ತರ್ ಮುಂದಿಟ್ಟು ಅವರನ್ನು ಅಚ್ಚರಿಯಲ್ಲಿ ಕೆಡವಿದ್ದರು.
ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಮ್ ಕಾರ್ಪೊರೇಷನ್ (ಐಆರ್ಸಿಟಿಸಿ) ನವರಾತ್ರಿ ಸಂದರ್ಭಗಳಲ್ಲಿ ಹಿಂದು ಪ್ರಯಾಣಿಕರಿಗೆ ‘ಉಪವಾಸ ಊಟ’ಗಳನ್ನು ಪೂರೈಸುತ್ತದೆ,ಆದರೆ ರಮಝಾನ್ ಸಂದರ್ಭದಲ್ಲಿ ಇಂತಹ ಸೇವೆ ಲಭ್ಯವಿರುವುದಿಲ್ಲ ಎಂದು ಅಧಿಕಾರಿಯೋರ್ವರು ತಿಳಿಸಿದರು.
 
ಭಾರತೀಯ ರೈಲ್ವೆಗೆ ಕೃತಜ್ಞತೆಗಳನ್ನು ಸಲ್ಲಿಸಿ ಟ್ವೀಟಿಸಿರುವ ಅಖ್ತರ್,‘‘ಧನಬಾದ್ನಲ್ಲಿ ಶತಾಬ್ದಿ ಎಕ್ಸಪ್ರೆಸ್ ಹತ್ತಿದ ತಕ್ಷಣ ತಿಂಡಿಯನ್ನು ಪಡೆದುಕೊಂಡಿದ್ದೆ. ನಾನು ಉಪವಾಸವಿದ್ದರಿಂದ ಸ್ವಲ್ಪ ಹೊತ್ತಿನ ಬಳಿಕ ಚಹಾ ತರುವಂತೆ ಪ್ಯಾಂಟ್ರಿ ಪರಿಚಾರಕನಿಗೆ ಸೂಚಿಸಿದ್ದೆ. ‘ಆಪ್ ರೋಝಾ ಹೈ’ಎಂದು ಆತ ಪ್ರಶ್ನಿಸಿದ್ದ,ಹೌದು ಎಂದು ಉತ್ತರಿಸಿದ್ದೆ. ಬಳಿಕ ಇನ್ನೋರ್ವರು ಇಫ್ತಾರ್ ಊಟದೊಂದಿಗೆ ಆಗಮಿಸಿದ್ದರು’’ ಎಂದು ತಿಳಿಸಿದ್ದಾರೆ. ಇಫ್ತಾರ್ ಊಟದ ಚಿತ್ರವನ್ನೂ ಅವರು ಟ್ವೀಟ್ನೊಂದಿಗೆ ಲಗತ್ತಿಸಿದ್ದಾರೆ.

ರೈಲಿನಲ್ಲಿದ್ದ ಕೇಟರಿಂಗ್ ಮ್ಯಾನೇಜರ್ ಖುದ್ದಾಗಿ ಊಟವನ್ನು ವ್ಯವಸ್ಥೆ ಮಾಡಿದ್ದರು. ಸಿಬ್ಬಂದಿಗಳು ತಮ್ಮ ಉಪವಾಸ ಮುರಿಯಲು ಸಿದ್ಧರಾಗುತ್ತಿದ್ದರು ಮತ್ತು ಪ್ರಯಾಣಿಕ ಅದೇ ಬೋಗಿಯನ್ನು ಪ್ರವೇಶಿಸಿದ್ದರು. ಅವರು ರೋಝಾದಲ್ಲಿದ್ದಾರೆ ಎನ್ನುವುದು ಗೊತ್ತಾದಾಗ ಸಿಬ್ಬಂದಿಗಳು ಇಫ್ತಾರ್ನ್ನು ಅವರೊಂದಿಗೆ ಹಂಚಿಕೊಂಡಿದ್ದರು. ಇದು ಮೂಲ ಮಾನವೀಯತೆ ಎಂದು ಕೇಟರಿಂಗ್ ಅಧಿಕಾರಿ ಪ್ರಕಾಶ್ ಕುಮಾರ್ ಬೆಹೆರಾ ಹೇಳಿದರು.
ಕೋಮು ಸೌಹಾರ್ದದ ಪ್ರಯತ್ನಕ್ಕಾಗಿ ಸಿಬ್ಬಂದಿಗಳನ್ನು ಅಭಿನಂದಿಸಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು,‘ನೀವು ಸಿಬ್ಬಂದಿಗಳಿಗೆ ಥ್ಯಾಂಕ್ಸ್ ಹೇಳಬೇಕೇ ಹೊರತು ರೈಲ್ವೆಗಲ್ಲ ’ಎಂದು ಅಖ್ತರ್ ಗಮನವನ್ನು ಸೆಳೆದಿದ್ದಾರೆ.

ಈ ನಡುವೆ ಟ್ವಿಟರ್ನಲ್ಲಿ ಅಖ್ತರ್ ಅವರನ್ನು ತಲುಪಿರುವ ಕೇಂದ್ರ ಸಹಾಯಕ ರೈಲ್ವೆ ಸಚಿವೆ ದರ್ಶನಾ ಜರ್ದೋಷ್ ಅವರು,ನಿಮ್ಮ ಮಾತುಗಳು ಇಡೀ ಭಾರತೀಯ ರೈಲ್ವೆ ಕುಟುಂಬದ ಹೃದಯಗಳನ್ನು ಸ್ಪರ್ಶಿಸಿವೆ. ಮೋದಿ ನೇತೃತ್ವದ ಸರಕಾರವು ಸಬ್ ಕಾ ಸಾಥ್,ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ ಧ್ಯೇಯವಾಕ್ಯದೊಂದಿಗೆ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇದು ಪರಿಪೂರ್ಣ ಉದಾಹರಣೆಯಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News