×
Ad

ಸುಳ್ಳು ಸಾಕ್ಷ್ಯ, ನಕಲಿ ದಾಖಲೆ ಸೃಷ್ಠಿಸಿ ವಂಚನೆ: ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶ

Update: 2022-04-27 23:37 IST

ಉಡುಪಿ : ಜಾಗದ ವಿಚಾರಕ್ಕೆ ಸಂಬಂಧಿಸಿ ಸುಳ್ಳು ಸಾಕ್ಷ್ಯ ಹಾಗೂ ನಕಲಿ ದಾಖಲೆ ಸೃಷ್ಠಿಸಿ ಪ್ರಾಥಮಿಕ ಡಿಕ್ರಿ ಪಡೆಯುವ ಮೂಲಕ ಉಡುಪಿಯ ಸಿವಿಲ್ ಕೋರ್ಟ್‌ಗೆ ವಂಚನೆ ಎಸಗಿರುವ ಆರೋಪಿಗಳ ವಿರುದ್ಧ ನ್ಯಾಯಾ ಲಯದಲ್ಲಿಯೇ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೋರ್ಟ್ ಆದೇಶಿಸಿರುವ ಅಪರೂಪದ ಘಟನೆ ವರದಿಯಾಗಿದೆ.

ಆರೋಪಿಗಳಾದ ಉಡುಪಿ ಕೊರಂಗ್ರಪಾಡಿಯ ಕೆ.ಜಗನ್ನಾಥ್ ಶೆಟ್ಟಿ(71), ಪಿ.ನಿತ್ಯಾನಂದ ಶೆಟ್ಟಿ(65), ಸುಖಾನಂದ ಶೆಟ್ಟಿ(54), ಪ್ರಭಾವತಿ ಶೆಟ್ಟಿ(45) ಹಾಗೂ ಆತುಲ್ ಹೆಗ್ಡೆ ವಿರುದ್ಧ ಭಾರತೀಯ ದಂಡಸಂಹಿತೆ ಕಲಂ 120(ಬಿ), 419, 465, 467, 468, 471, 478, 193, 199, ಸಹವಾಚಕ ಕಲಂ 38ರನ್ವಯ ನ್ಯಾಯಾಲಯದ ಶಿರಸ್ತೇದಾರರ ಮೂಲಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವಂತೆ ಉಡುಪಿಯ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಭುಸಗೊಳ ಎ.22ರಂದು ಆದೇಶ ನೀಡಿದ್ದಾರೆ.

ಘಟನೆಯ ಹಿನ್ನೆಲೆ

ಕೊರಂಗ್ರಪಾಡಿಯಲ್ಲಿರುವ ಸುಮಾರು 22 ಎಕರೆ ಜಾಗದ ಪಾಲಿಗೆ ಸಂಬಂಧಿಸಿ ಜಗನ್ನಾಥ್ ಶೆಟ್ಟಿ, ಸುಖಾನಂದ ಶೆಟ್ಟಿ, ಪ್ರಭಾವತಿ ಶೆಟ್ಟಿ ಅವರ ಪವರ್ ಆಫ್ ಅರ್ಟಾನಿಯೊಂದಿಗೆ ಪಿ.ನಿತ್ಯಾನಂದ ಶೆಟ್ಟಿ, ದಿವಾಕರ್ ಶೆಟ್ಟಿ ಹಾಗೂ ಇತರ 20 ಮಂದಿಯನ್ನು ಪ್ರತಿವಾದಿಗಳನ್ನಾಗಿಸಿ ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ 2015ರ ಆ.10ರಂದು ವ್ಯಾಜ್ಯ ಹೂಡಿದ್ದರು.

ಪ್ರತಿವಾದಿ 20 ಮಂದಿಯ ವಿಳಾಸವನ್ನು ಕೂಡ ಕೊರಂಗ್ರಪಾಡಿ ಎಂದೇ ನಮೂದಿಸಲಾಗಿತ್ತು. ಈ ಸಂಬಂಧ ಕೋರ್ಟ್ ನೋಟೀಸ್ ಜಾರಿ ಮಾಡಿ ಪ್ರತಿವಾದಿಗಳನ್ನು ಹಾಜರಾಗುವಂತೆ ಸೂಚಿಸಿತ್ತು. ಆ.20ರಂದು ಪ್ರತಿವಾದಿಗಳ ಹೆಸರಿನಲ್ಲಿ ಬೇರೆ ವ್ಯಕ್ತಿಗಳು ಕೋರ್ಟ್‌ಗೆ ಹಾಜರಾಗಿದ್ದು, ಅದರಲ್ಲಿ 17 ಮಂದಿ ಪರವಾಗಿ ಪವರ್ ಆಫ್ ಅರ್ಟಾನಿ ಪಡೆದ ಅತುಲ್ ಹೆಗ್ಡೆ ಎಂಬವರು ವಕೀಲರ ಮೂಲಕ ನ್ಯಾಯಾಲಯದಲ್ಲಿ ವಕಾಲತ್ತು ಸಲ್ಲಿಸಿದ್ದರು. ಉಳಿದಂತೆ ನ್ಯೂಝಿಲ್ಯಾಂಡ್‌ನಲ್ಲಿದ್ದ ಸವಿತಾ ಶೆಟ್ಟಿ, ಶಶಿಕಾಂತ್ ಶೆಟ್ಟಿ ಮತ್ತು 1991ರಲ್ಲಿಯೇ ಮೃತಪಟ್ಟಿದ್ದ ಗೋಪಾಲಕೃಷ್ಣ ಶೆಟ್ಟಿ ಅವರ ಹೆಸರಿನಲ್ಲಿಯೂ ಸುಳ್ಳು ವಕಾಲತ್ತು ಗಳನ್ನು ಸಲ್ಲಿಸಲಾಗಿತ್ತು.

ಈ ಜಾಗದ ಪಾಲಿನಲ್ಲಿ ಯಾವುದೇ ತಕರಾರು ಇಲ್ಲ ಎಂಬುದಾಗಿ ಇವರು ನಕಲಿ ಅಫಿದವಿತ್, ಜಂಟಿ ಅರ್ಜಿ, ಸುಳ್ಳು ಹೇಳಿಕೆ ಮತ್ತು ನಕಲಿ ದಾಖಲೆ, ಸುಳ್ಳು ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ಅರ್ಜಿಯ ಪ್ರಕಾರ ವಕಾಲತ್ತು ಸಲ್ಲಿಸಿರುವವರು ನಿಜ ಪ್ರತಿವಾದಿಗಳೇ ಎಂದು ನಂಬಿ ನ್ಯಾಯಾ ಲಯವು ಅದೇ ವರ್ಷ ಸೆ.10ರಂದು ಪ್ರಾಥಮಿಕ ಡಿಕ್ರಿಯನ್ನು ಮಂಜೂರು ಮಾಡಿತು. ಹೀಗೆ ಆರೋಪಿಗಳು ಪ್ರಮುಖ ನಾಲ್ಕು ಮಂದಿಗೆ 5 ಎಕರೆ ಮತ್ತು ಉಳಿದ 20 ಮಂದಿಗೆ 17 ಎಕರೆ ಎಂಬುದಾಗಿ ಪಾಲು ಮಾಡಿಕೊಂಡು, ಆರ್‌ಟಿಸಿ ಮಾಡಿಕೊಂಡಿದ್ದರು.

ತಮಗೆ ದೊರೆತ ಐದು ಎಕರೆ ಜಾಗವನ್ನು ಆರೋಪಿಗಳಾದ ಜಗನ್ನಾಥ್ ಶೆಟ್ಟಿ, ಸುಖಾನಂದ ಶೆಟ್ಟಿ, ಪ್ರಭಾವತಿ ಶೆಟ್ಟಿ, ಪಿ.ನಿತ್ಯಾನಂದ ಶೆಟ್ಟಿ ಮಾರಾಟಕ್ಕೆ ಮುಂದಾಗಿದ್ದರು. ಈ ವಿಚಾರ ತಿಳಿದ ಕೆ.ದಿವಾಕರ್ ಶೆಟ್ಟಿ, ಸುಳ್ಳು ಸಾಕ್ಷ್ಯ, ನಕಲಿ ದಾಖಲೆ ಸೃಷ್ಠಿಸಿ ಕೋರ್ಟಿಗೆ ವಂಚಿಸಿ ಪ್ರಾಥಮಿಕ ಡಿಕ್ರಿ ಪಡೆದುಕೊಂಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ 2018ರ ಮಾ.3ರಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.

ಈ ಸಂಬಂಧ ಆರೋಪಿಗಳು ಹೆಸರಿಸಲಾದ ನಿಜವಾದ ಪ್ರತಿವಾದಿಗಳ ಪೈಕಿ ಆರು ಮಂದಿ ನ್ಯಾಯಾಲಯಕ್ಕೆ ಬಂದು ಅಫಿದಾವಿತ್ ಸಲ್ಲಿಸಿದ್ದರು. ಮೃತ ಗೋಪಾಲಕೃಷ್ಣ ಶೆಟ್ಟಿ ಪುತ್ರ ನ್ಯಾಯಾಲಯಕ್ಕೆ ಬಂದು, ತಂದೆಯ ಮರಣ ಪ್ರಮಾಣಪತ್ರವನ್ನು ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶ ಮಹಾಂತೇಶ್, ವಾದ ಪ್ರತಿವಾದಗಳನ್ನು ಆಲಿಸಿ, ಆರೋಪಿಗಳು ಸುಳ್ಳು ಸಾಕ್ಷ್ಯ, ನಕಲಿ ದಾಖಲೆ ಸೃಷ್ಠಿಸಿ ನ್ಯಾಯಾಲಯಕ್ಕೆ ವಂಚಿಸಿದ್ದಾರೆಂದು ಅಭಿಪ್ರಾಯ ಪಟ್ಟರು.

ಅದರಂತೆ ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಶಿರಸ್ತೇದಾರರಿಗೆ ಆದೇಶ ನೀಡಿತು. ಅರ್ಜಿದಾರ ಕೆ.ದಿವಾಕರ್ ಶೆಟ್ಟಿ ಪರವಾಗಿ ಉಡುಪಿಯ ಹಿರಿಯ ನ್ಯಾಯವಾದಿ ಎಂ.ಶಾಂತಾರಾಮ್ ಶೆಟ್ಟಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News